ಕನ್ನಡಪ್ರಭವಾರ್ತೆ ಮೂಲ್ಕಿ
ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿ, ಹಿಂದೂ ಧರ್ಮಕ್ಕೆ ಕೊಡುಗೆ ನೀಡಿದ ಶಿವಾಜಿ ಮಹಾರಾಜರ ಕಥೆಯನ್ನಾಧಾರಿತ ನಾಟಕ ಕಟೀಲಿನಲ್ಲಿ ಪ್ರದರ್ಶನ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜರುಗಿದ ಕಲಾಸಂಗಮ ಮಂಗಳೂರು ಕಲಾವಿದರ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಛತ್ರಪತಿ ಶಿವಾಜಿ’ ನಾಟಕದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ನಮ್ಮ ಕಲಾಸಂಗಮ ತಂಡ ಪ್ರತಿಯೊಂದು ನಾಟಕವನ್ನು ಭಿನ್ನವಾಗಿ ರಂಗಕ್ಕೆ ತರಲಾಗುತ್ತಿದ್ದು ಶಿವಾಜಿ ನಾಟಕ ಕೂಡಾ ವಿಭಿನ್ನ ರಂಗ ವಿನ್ಯಾಸದೊಂದಿಗೆ ತೆರೆಗೆ ಬರುತ್ತಿದೆ. ಹಿಂದಿನ ನಾಟಕದಂತೆ ಈ ನಾಟಕಕ್ಕೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ. ಪ್ರಥಮ ಪ್ರದರ್ಶನ ಕಟೀಲು ದುರ್ಗೆಯ ಸನ್ನಿದಿ ಬಳಿ ನಡೆಯುವುದು ಸಂತಸದ ವಿಷಯವಾಗಿದ್ದು ಶಶಿರಾಜ್ ಕಾವೂರು ನಾಟಕರಚಿಸಿದ್ದು, ಖ್ಯಾತ ನಟ ಪ್ರಥ್ವಿ ಅಂಬರ್ ಶಿವಾಜಿ ಪಾತ್ರಕ್ಕೆ ಧ್ವನಿ ನೀಡಿದ್ದು ಉತ್ತಮವಾಗಿ ಮೂಡಿ ಬಂದಿದೆ, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆಂದು ತಿಳಿಸಿದರು.ಈ ಸಂದರ್ಭ ಸದಾನಂದ ಆಸ್ರಣ್ಣ, ಸಾಹಿತಿ ಶಶಿರಾಜ್ ಕಾವೂರು, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರನಟ ಪೃಥ್ವಿ ಅಂಬರ್, ಎ.ಕೆ.ವಿಜಯ್ ಕೋಕಿಲ, ಧನಂಜಯ ಶೆಟ್ಟಿಗಾರ್ ದುಬೈ, ಪ್ರಥ್ಬಿರಾಜ ಆಚಾರ್ಯ. ಸಿ.ಎ ಚಂದ್ರಶೇಖರ ಶೆಟ್ಟಿ, ದೊಡ್ಡಯ್ಯ ಮೂಲ್ಯ, ಈಶ್ವರ್ ಕಟೀಲು, ಪ್ರದ್ಯುಮ್ನ ರಾವ್, ಅಭಿಲಾಷ್ ಶೆಟ್ಟಿ, ಸುನಿಲ್ ಆಳ್ವ ಮತ್ತಿತರರಿದ್ದರು. ಶರತ್ ಶೆಟ್ಟಿ ನಿರೂಪಿಸಿದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಶಿವಾಜಿ ನಾಟಕವನ್ನು ವೀಕ್ಷಿಸಿದರು.