ಬಳ್ಳಾರಿ: ನವ ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಜನ ಸಾಮಾನ್ಯರ ಒಳಿತಿಗಾಗಿ ಶ್ರಮಿಸಿದವರು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾ ಪೌರ ಮುಲ್ಲಂಗಿ ನಂದೀಶ್ ಹೇಳಿದರು.
ನಾಡದೊರೆ ಕೆಂಪೇಗೌಡ 52 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ, ಜನತೆಯ ಮನೆ-ಮನಗಳಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ ಎಂದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮೊದಲೇ ನಾಂದಿ ಹಾಡಿದವರು ಕೆಂಪೇಗೌಡರು. ಅವರ ದೂರದೃಷ್ಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ನಾಡಪ್ರಭು ಕೆಂಪೇಗೌಡರು ಸಾವಿರಾರು ಕೆರೆಗಳ ನಿರ್ಮಾತೃ. ನವ ಬೆಂಗಳೂರಿನ ನಿರ್ಮಾಣದಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಬಳ್ಳಾರಿ ತಾಲೂಕಿನ ಹೊಸ ಯರ್ರಗುಡಿಯ ಸಹ ಶಿಕ್ಷಕರಾದ ನಂದೀಶ್ ಪುಂಡಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ನಾಡದೊರೆ ಕೆಂಪೇಗೌಡರು ಆತ್ಮವಿಶ್ವಾಸದಿಂದ ನೂತನ ಬೆಂಗಳೂರು ಮಹಾನಗರ ಸೃಷ್ಟಿಮಾಡಿದವರು, ಅವರು ನಡೆದಂತಹ ದಾರಿ ಮತ್ತು ಅವರ ಆಡಳಿತ ಆಳ್ವಿಕೆಯನ್ನು ಈ ದಿನ ಸ್ಮರಿಸುವಂತದ್ದಾಗಿದೆ ಎಂದು ಹೇಳಿದರು.
ಕೆಂಪೇಗೌಡರಿಗು ಮತ್ತು ವಿಜಯನಗರ ಸಾಮ್ರಾಜ್ಯಕ್ಕೂ ಅವಿನಾಭಾವ ಸಂಬಂಧವಿದ್ದು, ವಿಶ್ವ ವಿಖ್ಯಾತ ಹಂಪಿಯ ವಿಜಯನಗರ ಸಾಮ್ರಾಜ್ಯದ ಉಳಿವಿಗಾಗಿ ಹೋರಾಡಿದ ಮಹಾನ್ ವೀರಯೋಧ ಅವರಗಾಗಿದ್ದಾರೆ ಎಂದರು.
ಉಪ ಮೇಯರ್ ಡಿ.ಸುಖುಂ, ಪಾಲಿಕೆಯ ಅಧಿಕಾರಿ ಅಬ್ದುಲ್ ರೆಹಮಾನ್, ಬಳ್ಳಾರಿ ತಾಲೂಕು ತಹಶೀಲ್ದಾರ ಗುರುರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಿಬ್ಬಂದಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.