ಕೊಡಗು ಪ್ರವಾಸಿಗರಿಗೆ ಸುರಕ್ಷಿತ: ದಿನೇಶ್ ಕಾರ್ಯಪ್ಪ

KannadaprabhaNewsNetwork |  
Published : May 27, 2026, 03:00 AM IST
ಚಿತ್ರ :  26ಎಂಡಿಕೆ5 : ಸಭೆಯಲ್ಲಿ ಪಾಲ್ಗೊಂಡಿದ್ದವರು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯು ಪ್ರವಾಸಿಗರಿಗೆ ಸುರಕ್ಷಿತವಾಗಿದ್ದು, ಆತಿಥ್ಯಕ್ಕೆ ಎಂದಿನಂತೆ ಹೆಸರುವಾಸಿಯಾಗಿದೆ. ವದಂತಿಗಳಿಗೆ ಪ್ರವಾಸಿಗರು ಕಿವಿಗೊಡಬಾರದು ಎಂಬ ಸಂದೇಶವನ್ನು ಪ್ರವಾಸಿಗರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮಿಗಳು, ಸಂಘಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಕೂರ್ಗ್‌ ಹೋಟೇಲ್, ರೆಸಾರ್ಟ್‌ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೊಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ಮಡಿಕೇರಿ: ಕೊಡಗು ಜಿಲ್ಲೆಯು ಪ್ರವಾಸಿಗರಿಗೆ ಸುರಕ್ಷಿತವಾಗಿದ್ದು, ಆತಿಥ್ಯಕ್ಕೆ ಎಂದಿನಂತೆ ಹೆಸರುವಾಸಿಯಾಗಿದೆ. ವದಂತಿಗಳಿಗೆ ಪ್ರವಾಸಿಗರು ಕಿವಿಗೊಡಬಾರದು ಎಂಬ ಸಂದೇಶವನ್ನು ಪ್ರವಾಸಿಗರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮಿಗಳು, ಸಂಘಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಕೂರ್ಗ್‌ ಹೋಟೇಲ್, ರೆಸಾರ್ಟ್‌ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೊಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ನಗರದ ವ್ಯಾಲಿವ್ಯೂ ಹೋಟೇಲ್ ಸಭಾಂಗಣದಲ್ಲಿ ಕೂರ್ಗ್‌ ಹೊಟೇಲ್‌, ರೆಸಾರ್ಟ್‌ ಅಸೋಸಿಯೇಷನ್ ವತಿಯಿಂದ ಆಯೋಜಿತ ಪ್ರವಾಸೋದ್ಯಮ ಸಂಬಂಧಿತ ವಿವಿಧ ಸಂಘಸಂಸ್ಥೆ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಮಾತನಾಡಿದರು.

ಕೆಲವರು ಅನಗತ್ಯವಾಗಿ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ಇಲ್ಲಸಲ್ಲದ ಟೀಕೆ, ದೂರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿಸುತ್ತಾ ಕೊಡಗಿನ ಆತಿಥ್ಯ ಸಂಸ್ಕೃತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಆಧಾರ ರಹಿತ ಹೇಳಿಕೆಗಳನ್ನು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡ ಸರ್ವರೂ ಖಂಡಿಸಲೇಬೇಕಾಗಿದೆ ಎಂದು ದಿನೇಶ್ ಹೇಳಿದರು. ಕೊಡಗು ಚೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗಿನ ವ್ಯಾಪಾರಸ್ಥರು ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರನ್ನು ನಂಬಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಹೀಗಿರುವಾಗ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾದಲ್ಲಿ ಅದು ವರ್ತಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎದು ಆತಂಕ ವ್ಯಕ್ತಪಡಿಸಿದರು. ಕೂರ್ಗ್‌ ಹೊಟೇಲ್‌, ರೆಸಾರ್ಟ್‌ ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ವಿಳಂಬರಹಿತವಾಗಿ ಅಭಿವೃದ್ದಿ ಮಾಡುವುದು ಮುಖ್ಯ. ಅನೇಕ ತಾಣಗಳಲ್ಲಿ ಮೂಲಸೌಲಭ್ಯವೇ ಇಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಂಘಸಂಸ್ಥೆಗಳು ಒಗ್ಗೂಡಿ ತಮ್ಮ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣಗಳಲ್ಲಿ ಕೈಗೊಳ್ಳಬೇಕಾದ ಅಭಿವೖದ್ದಿ ಕಾರ್ಯಗಳ ಬಗ್ಗೆ ಬಜೆಟ್ ಸಹಿತವಾಗಿ ವರದಿ ನೀಡಿದರೆ ಸರ್ಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಚರ್ಚಿಸಲು ಅನುಕೂಲವಾಗಲಿದೆ ಎಂದರು.

ಸಚಿವರು ಭೇಟಿ ನೀಡಲಿ: ಲೇಖಕ ಅನಿಲ್ ಹೆಚ್.ಟಿ. ಮಾತನಾಡಿ, ರಾಜ್ಯದ ಪ್ರವಾಸೋದ್ಯಮಕ್ಕ ಕೊಡಗು ಜಿಲ್ಲೆಯು ಮಹತ್ವದ ಕೊಡುಗೆ ನೀಡಿದ್ದರೂ ಅನೇಕ ವರ್ಷಗಳಿಂದ ಪ್ರವಾಸೋದ್ಯಮ ಖಾತೆ ಸಚಿವರು ಜಿಲ್ಲೆಗೆ ಭೇಟಿ ನೀಡೇ ಇಲ್ಲ. ಜಿಲ್ಲೆಗೆ ಭೇಟಿ ನೀಡಿದರೆ ಮಾತ್ರ ಸಚಿವರಿಗೆ, ಉನ್ನತ ಅಧಿಕಾರಿಗಳಿಗೆ ಕೊಡಗಿನ ಪ್ರವಾಸೋದ್ಯಮದ ಬೇಕು ಬೇಡಿಕೆ ತಿಳಿಯಲು ಸಾಧ್ಯ ಎಂದರು. ದುಬಾರೆಯ ರಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ ಮಾತನಾಡಿ, ಈಗಾಗಲೇ ದುಬಾರೆಯಲ್ಲಿರುವ 84 ರಾಫ್ಟಿಂಗ್‌ ಸಂಖ್ಯೆಯನ್ನು ಸ್ಥಗಿತಗೊಳಿಸಬೇಕು. ಹೆಚ್ಚುವರಿ ರಾಫ್ಟಿಂಗ್‌ ನೀಡಿದರೆ ಸಮಸ್ಯೆಯಾಗಲಿದೆ ಎಂದರು.

ದುಬಾರೆಯ ರಾಫ್ಟಿಂಗ್‌ ಅಸೋಸಿಯೇಷನ್ ಸಲಹೆಗಾರ ಕೆ.ಎಸ್.ರತೀಶ್ ಮಾತನಾಡಿ ದುಬಾರೆಯಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ ಎಂದರು.

ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಮಾಂದಲಪಟ್ಟಿ ಜೀಪು ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ,ಮಡಿಕೇರಿ ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ತೆಕ್ಕಡ ಸಂತೋಷ್, ಕೂರ್ಗ್‌ ಹೋಟೇಲ್ ಮತ್ತು ರೆಸಾರ್ಟ್‌ ಅಸೋಸಿಯೇಷನ್ ಪದಾಧಿಕಾರಿ ಮೋಹನ್ ದಾಸ್, ಕೊಡಗು ಚೇಂಬರ್ ಆಫ್ ಕಾಮರ್ಸ್‌ ಉಪಾಧ್ಯಕ್ಷ ಎ.ಕೆ. ನವೀನ್, ಮಾತನಾಡಿದರು. ಕೂರ್ಗ್‌ ಹೊಟೇಲ್‌ ಮತ್ತು , ರೆಸಾರ್ಟ್‌ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಖಜಾಂಜಿ ಸಾಗರ್ ಗಣಪತಿ, ಜಂಟಿ ಕಾರ್ಯದರ್ಶಿ ಡಿ.ಕೆ. ಮಂಜುನಾಥ್ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆಯಲ್ಲಿ ಜು. 22ರಿಂದ ‘ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್’
‘ತುಡುವೆ ಜೇನು’ ರಕ್ಷಣೆ ಚಿಂತನೆ: ಗಿರಿಜನರಿಗೆ ಚಿಂತೆ!