ಕೊಡವ ಮುಸ್ಲಿಮರಿಂದ ಕಾಟ್ರಕೊಲ್ಲಿ ಪುತ್ತರಿ ಆಚರಣೆ

KannadaprabhaNewsNetwork |  
Published : Dec 07, 2025, 03:45 AM IST
ಚಿತ್ರ :  5ಎಂಡಿಕೆ2 : ಕೊಡವ ಮುಸ್ಲಿಮರಿಂದ ಕಾಟ್ರಕೊಲ್ಲಿ ಪುತ್ತರಿ ಆಚರಣೆ ಜರುಗಿತು.  | Kannada Prabha

ಸಾರಾಂಶ

ಕಾಟ್ರಕೊಲ್ಲಿಯ ಆಲೀರ ಎಂ ಸಾದಲಿ ಅವರ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮ ಕೆಎಂಎ ವತಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಗುರುವಾರ ರಾತ್ರಿ ನೂರಾರು ಕೊಡವ ಮುಸ್ಲಿಂ ಸಮುದಾಯದವರು ದ. ಕೊಡಗಿನ ಕಾಟ್ರಕೊಲ್ಲಿಯಲ್ಲಿ ಅಲ್ಲಿನ ಆಲೀರ ಕುಟುಂಬಸ್ಥರ ಆತಿಥ್ಯದಲ್ಲಿ ಅದ್ಧೂರಿಯಾಗಿ ಆಚರಿಸಿದರು.ಕಾಟ್ರಕೊಲ್ಲಿಯ ಆಲೀರ ಎಂ. ಸಾದಲಿ ಅವರ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಕೆಎಂಎ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲೀರ ಕುಟುಂಬದ ಹಿರಿಯರಾದ ಸಾದಲಿ ಅವರು ಭತ್ತದ ತೆನೆಯನ್ನು ಕುಯ್ದು ನೆರೆದಿದ್ದವರಿಗೆಲ್ಲ ಹಂಚಿದರು.

ಕಾರ್ಯಕ್ರಮದಲ್ಲಿ ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಕೊಟ್ಟಮುಡಿ, ಕುಂಜಿಲ, ಚೆರಿಯಪರಂಬು ಎಡಪಾಲ, ಕೊಂಡಂಗೇರಿ, ಗುಂಡಿಕೆರೆ, ಕೊಮ್ಮೆತೋಡು, ಚಾಮಿಯಾಲ, ವಿರಾಜಪೇಟೆ, ನಲ್ವತ್ತೋಕ್ಲು, ಅಂಬಟ್ಟಿ, ಚಿಮ್ಮಿಚ್ಚಿಕುಂಡ್ (ಹಳ್ಳಿಗಟ್ಟು), ಮೊದಲಾದ ಪ್ರದೇಶಗಳ ಸದಸ್ಯರು, ಕಾಟ್ರಕೊಲ್ಲಿಯ ಆಲೀರ ಕುಟುಂಬಸ್ಥರು, ಹಲವಾರು ಗ್ರಾಮಸ್ಥರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಮಾತನಾಡಿ, ಕೊಡವ ಮುಸ್ಲಿಮರ ಸಾಂಪ್ರದಾಯಿಕ ಆಚರಣೆಗಳನ್ನು ಮತ್ತು ಪದ್ಧತಿ ಪರಂಪರೆಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆಯಿದೆ ಎಂದು ಒತ್ತಿ ಹೇಳಿದರು. ಕೆ.ಎಂ.ಎ. ನಿರ್ದೇಶಕರು ಮತ್ತು ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲೀರ ರಶೀದ್, ಕಾಟ್ರಕೊಲ್ಲಿಯ ಆಲೀರ ಕುಟುಂಬದ ಪ್ರಮುಖರಾದ ಎ. ಎ. ಆಜ್ಹೀಜ್ಹ್, ಆಲೀರ ಅಬ್ದುಲ್ಲ, ಆಲೀರ ಹುಸೈನ್, ಆಲೀರ ಸಿದ್ದೀಕ್, ಆಲೀರ ಮೊಯ್ದು ಮೊದಲಾದವರು ಕಾರ್ಯಕ್ರಮ ನಿರ್ವಹಿಸಿದರು.

ಕದಿರು ತೆಗೆದ ಬಳಿಕ ಆಲೀರ ಐನ್ ಮನೆ ಆವರಣದಲ್ಲಿ ಸಾಂಪ್ರದಾಯಿಕ ತಂಬಿಟ್ಟು- ಪುತ್ತರಿ ಗೆಣಸು ಉಪಹಾರವನ್ನು ಹಾಗೂ ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅವರ ಮನೆಯ ಆವರಣದಲ್ಲಿ ಊಟೋಪಚಾರವನ್ನು ವ್ಯವಸ್ಥೆಗೊಳಿಸಲಾಗಿತ್ತು. ಊಟದ ನಂತರ ಗದ್ದೆಯಿಂದ ತರಲಾದ ಕದಿರನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರಕ್ಕೆ ಹಾನಿಯಾಗದಂತೆ ಬೇಡ್ತಿ –ವರದಾ ನದಿ ತಿರುವು ಆಗಲಿ: ಬೊಮ್ಮಾಯಿ
ಅಂಬೇಡ್ಕರ್ ಜೀವನ ಮೌಲ್ಯಗಳು ಜಗತ್ತಿಗೆ ಆದರ್ಶ: ಶಾಸಕ ಶ್ರೀನಿವಾಸ