ಉಡುಪಿ: ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಶೇ. 40ರಷ್ಟು 25 ವರ್ಷದೊಳಗಿನ ಯುವಜನರಿದ್ದಾರೆ. ಅವರೇ ನಮ್ಮ ದೇಶದ ಆಸ್ತಿ. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗ ಕೂಡ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಣಿಪಾಲ ಮಾಹೆಯ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ನಮ್ಮ ಯುವಜನತೆಗೆ ಉತ್ತಮ ಉದ್ಯೋಗ ಸಿಕ್ಕಿದರೆ ಸಮಾಜ ಕೂಡ ಉತ್ತಮವಾಗಿರಲು ಸಾಧ್ಯ. ಗ್ರಾಮೀಣ ಭಾಗದಲ್ಲಿರುವ ದೇಶದ ಶೇ.70ರಷ್ಟು ಜನತೆಯನ್ನು ಮುಖ್ಯ ವಾಹಿನಿಗೆ ತಂದರೆ ದೇಶ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮದ ಜೊತೆ ಪ್ರಸಾದ್ ರಾಜ್ ಕಾಂಚನ್ ಇಂತಹ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದರಾಜ್ ಕಾಂಚನ್, ಉಡುಪಿ ಜಿಲ್ಲೆಯ ಯುವಜನತೆ ಸರಿಯಾದ ಉದ್ಯೋಗ ಸಿಗದೆ ಹೊರ ರಾಜ್ಯ, ಹೊರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಶ್ರೀನಿವಾಸ್ ವಿವಿಯ ಡಾ. ದಿವ್ಯಾರಾಣಿ ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮೇಳದಲ್ಲಿ 70 ಕಂಪನಿಗಳು ಭಾಗವಹಿಸಿದ್ದು, ಸುಮಾರು 7000ಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನ ಅಧ್ಯಕ್ಷ ಹರಿಪ್ರಸಾದ್ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು. ಪ್ರಿಯಾ ನಿರೂಪಿಸಿದರು.