ಯಲಬುರ್ಗಾ : ವಿದ್ಯಾರ್ಥಿಗಳಲ್ಲಿ ‘ಕೊನೆ ಬೆಂಚು’ ಕೊರಗು ನಿವಾರಿಸಿ ಎಲ್ಲರಿಗೂ ಉತ್ತಮ, ಗುಣಮಟ್ಟದ ಶಿಕ್ಷಣ ನೀಡಲು ಕೇರಳ ಸರ್ಕಾರ ಜಾರಿಗೆ ತಂದಿರುವ ಅರ್ಧ ವೃತ್ತಾಕಾರದ ಬೆಂಚ್ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಪ್ರಾಯೋಗಿಕವಾಗಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ಕೇರಳ ಶಾಲೆಯಲ್ಲಿ ಹೊಸ ಮಾದರಿ ಪ್ರಯೋಗದ ಕುರಿತು ‘ಕನ್ನಡಪ್ರಭ’ 12-7-2025ರಂದು ವರದಿ ಮಾಡಿತ್ತು. ಈ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿಹಾಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮುಂದಾಗಿದ್ದಾರೆ.
ಕೇರಳದ ಶಾಲೆಗಳ ಕೊಠಡಿಗಳಲ್ಲಿ ಬೆಂಚ್‌ಗಳನ್ನು ಅರ್ಧ ವೃತ್ತಾಕಾರದಲ್ಲಿ ಇರಿಸಿ ಮಕ್ಕಳಿಗೆ ಪಾಠ ಬೋಧನೆ ಮಾಡುವ ವಿಧಾನವನ್ನು ಬಂಡಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಅಳವಡಿಸಿಕೊಂಡಿದ್ದಾರೆ.
ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ದಡ್ಡರು, ಕಿಲಾಡಿಗಳು, ಮುಂದಿನ ಬೆಂಚಿನ ಹುಡುಗರು ಪ್ರತಿಭಾವಂತರು ಎನ್ನುವ ಅಪಸ್ವರಗಳು ಕೇಳಿಬರುತ್ತಿದ್ದವು. ಇದಕ್ಕೆ ಅಪವಾದ ಎಂಬಂತೆ ತಾಲೂಕಿನ ಬಂಡಿಹಾಳ ಶಾಲೆಯ ಶಿಕ್ಷಕರು ಕೊಠಡಿಯಲ್ಲಿ ಮಕ್ಕಳನ್ನು ಅರ್ಧ ವೃತ್ತಾಕಾರದಲ್ಲಿ ಬೆಂಚ್ ಹಾಕಿ ಕೂರಿಸಿ ಲಾಸ್ಟ್ ಬೆಂಚ್ ಮತ್ತು ಫಸ್ಟ್ ಬೆಂಚ್ ಭೇದ ಹೋಗಲಾಡಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಲಿಕೆಯಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿದೆ.
ನಕರಾತ್ಮಕ ಭಾವನೆಗೆ ಕೊನೆ
ಅರ್ಧ ವೃತ್ತಾಕಾರದಲ್ಲಿ ಬೆಂಚ್‌ಗಳನ್ನು ಹಾಕಿ ಪಾಠ ಬೋಧಿಸುವುದರಿಂದ ಮಕ್ಕಳಲ್ಲಿ ನಾನು ಕಲಿಕೆಯಲ್ಲಿ ಹಿಂದುಳಿದ್ದೇನೆ ಎನ್ನುವ ನಕರಾತ್ಮಕ ಭಾವನೆ ಹೋಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇಂದ್ರೀಕೃತವಾಗಿ ಪಾಠ ಮಾಡಲು ಸಹಕಾರಿಯಾಗುತ್ತದೆ. ಎಲ್ಲ ಹುಡುಗರು ಕಾಣಿಸುವುದರಿಂದ ಕಲಿಕೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಇದೊಂದು ಮಾದರಿ ಕಾರ್ಯವಾಗಿದ್ದು ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ಇದೇ ಮಾದರಿ ಅನುಸರಿಸಲು ಪ್ರಯತ್ನಿಸಲಾಗುವುದು.
ಸೋಮಶೇಖರಗೌಡ ಪಾಟೀಲ್, ಬಿಇಒ ಯಲಬುರ್ಗ
ಎಲ್ಲರಿಗೂ ಗುಣಮಟ್ಟದ ಶಿಕ್ಷಣ
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲಿ ಎನ್ನುವ ಉದ್ದೇಶದಿಂದ ಅರ್ಧ ವೃತ್ತಾಕಾರದಲ್ಲಿ ಕೂಡ್ರಿಸಿ ಪಾಠ ಬೋಧಿಸಲಾಗುತ್ತಿದೆ. ಕೊನೆಯ ಸಾಲಿನ ವಿದ್ಯಾರ್ಥಿ ಎನ್ನುವ ಭಾವನೆ ಹೋಗಲಾಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಈ ಮಾದರಿ ಪಾಠ ಬೋಧನೆ ತಾಲೂಕಿನಲ್ಲಿಯೇ ನಮ್ಮ ಶಾಲೆ ಮೊದಲಾಗಿದೆ.
-ಪರಪ್ಪ ಸೊಬಗಿನ, ಮುಖ್ಯಶಿಕ್ಷಕ, ಸರ್ಕಾರಿ ಪ್ರೌಢ ಶಾಲೆ ಬಂಡಿಹಾಳ
ಹೊಸ ಪ್ರಯೋಗ ಏಕೆ?
ಶಾಲೆಯಲ್ಲಿ ಮುಂದಿನ ಬೆಂಚ್‌ನಲ್ಲಿ ಕೂರುವವರು ಪ್ರತಿಭಾಶಾಲಿಗಳು, ಲಾಸ್ಟ್ ಬೆಂಚ್‌ನವರು ದಡ್ಡರೆಂಬ ನಕಾರಾತ್ಮಕ ಭಾವನೆ ಇದೆ
ಇಂಥ ಭಾವನೆ ತಡೆಯಲು ಲಾಸ್ಟ್ ಬೆಂಚನ್ನೇ ತೆಗೆವ ಕಲ್ಪನೆಯ ದೃಶ್ಯವೊಂದು ಇತ್ತೀಚಿನ ಮಲಯಾಳಂ ಚಿತ್ರವೊಂದರಲ್ಲಿ ಸೇರಿತ್ತು
ಇದರಿಂದ ಪ್ರಭಾವಿತವಾದ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕರ ಶಾಲೆಯಲ್ಲೂ ಇದೇ ಮಾದರಿಯನ್ನು ಪ್ರಯೋಗಿಸಲಾಗಿತ್ತು
ಇಂಥದ್ದೊಂದು ವರದಿ ‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡು ವೈರಲ್ ಆದ ಬೆನ್ನಲ್ಲೇ ಬಂಡಿಹಾಳದ ಶಾಲೆಯಲ್ಲೂ ಅದೇ ಪ್ರಯೋಗ ನಡೆದಿದೆ