ಕನ್ನಡಪ್ರಭ ವಾರ್ತೆ ಬೇಲೂರುಕೋರೆಗಾಂವ್‌ನಲ್ಲಿ ನಡೆದ ಯುದ್ಧವು, ಭಾರತದ ಇತಿಹಾಸದಲ್ಲಿ ಕೇವಲ ಒಂದು ಸೈನಿಕ ಸಂಘರ್ಷವಲ್ಲ; ಅದು ಬಹುಜನರ ಸ್ವಾಭಿಮಾನದ ಘೋಷಿತ ಪ್ರತಿರೋಧ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕರಾದ ಅಡ್ವೋಕೇಟ್ ಗಂಗಾಧರ್ ಬಹುಜನ್ ಅವರು ತಿಳಿಸಿದರು.ಕೋರೆಗಾಂವ್ ವಿಜಯೋತ್ಸವದ ಸ್ಮರಣಾರ್ಥಕವಾಗಿ ಬಹುಜನ ಸಮಾಜ ಪಾರ್ಟಿ ಬೇಲೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಗುರುವಾರ ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಅವಧಿಯಲ್ಲಿ ದಲಿತ, ಬಹುಜನರನ್ನು ಮನುಷ್ಯರು ಎಂದು ಪರಿಗಣಿಸದೆ, ಜಾತಿ ಆಧಾರಿತ ದಮನವನ್ನು ಮನುಸ್ಮೃತಿ ಆಧಾರಿತ ಕಾನೂನು, ಸಂಪ್ರದಾಯ ಮತ್ತು ಹಿಂಸೆಯ ಮೂಲಕ ಜಾರಿಗೊಳಿಸಿತ್ತು. ನೀರು, ಭೂಮಿ, ಶಿಕ್ಷಣ, ಸೇನೆಗೆ ಸೇರ್ಪಡೆ, ಸಾಮಾನ್ಯ ಗೌರವ – ಎಲ್ಲವೂ ಬಹುಜನರಿಗೆ ನಿರಾಕರಿಸಲ್ಪಟ್ಟಿತ್ತು. ಈ ಕ್ರೂರ ಮತ್ತು ಅಮಾನವೀಯ ವ್ಯವಸ್ಥೆಯ ವಿರುದ್ಧವೇ ಈ ಕೋರೆಗಾಂವ್ ಯುದ್ಧ ನಡೆಯಿತು ಎಂದರು.ಕೇವಲ 500 ಜನ ಮಹರ್ ಸೈನಿಕರು 28,000 ಸಂಖ್ಯೆಯ ಬಹುದೊಡ್ಡ ಪೇಶ್ವೆ ಸೇನೆಯನ್ನು ಎದುರಿಸಿ ಹಿಮ್ಮೆಟ್ಟಿಸಿ ಸೋಲಿಸಿದ್ದು ಐತಿಹಾಸಿಕ ದಾಖಲೆಯಾಗಿದೆ. ಈ ಯುದ್ಧದಲ್ಲಿ ಸೋತದ್ದು ಕೇವಲ ಪೇಶ್ವೆ ಸೇನೆ ಅಲ್ಲ, ಸೋತದ್ದು ಶ್ರೇಣೀಕೃತ ಜಾತಿ ವ್ಯವಸ್ಥೆ, ಮತ್ತು ಬ್ರಾಹ್ಮಣಿಕೆಯ ಅಧಿಪತ್ಯ. ಕೋರೆಗಾಂವ್ ವಿಜಯಸ್ತಂಭದಲ್ಲಿ ಕೆತ್ತಲ್ಪಟ್ಟಿರುವ 22 ಮಹರ್ ಸೈನಿಕರ ಹೆಸರುಗಳು, ಬಹುಜನರು ಯಾವತ್ತೂ ಯಾರಿಗೂ ದಾಸರಲ್ಲ, ಗುಲಾಮರಲ್ಲ, ನಾವು ಸ್ವಾಭಿಮಾನಿಗಳು, ಕೆಚ್ಚೆದೆಯ ಹೋರಾಟಗಾರರು ಎಂಬುದನ್ನು ಘೋಷಿಸುತ್ತವೆ ಎಂದರು.ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೊದಲ ಬಾರಿಗೆ 1927ರಲ್ಲಿ ಈ ಕೋರೆಗಾಂವ್ ವಿಜಯಸ್ತಂಭದ ಬಳಿ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಕೋರೆಗಾಂವ್ ಯುದ್ಧವು ದಲಿತ–ಬಹುಜನರ ಸ್ವಾಭಿಮಾನ ಮತ್ತು ರಾಜಕೀಯ ಜಾಗೃತಿಯ ಸಂಕೇತವಾಗಿ ಗುರುತಿಸಿದ್ದರು. ಇಂದಿಗೂ ದೇಶದಲ್ಲಿ ಜಾತಿ, ಅಸಮಾನತೆ, ಸಾಮಾಜಿಕ ಬಹಿಷ್ಕಾರ ಮತ್ತು ದೌರ್ಜನ್ಯ ಮುಂದುವರೆದಿರುವಾಗ, ಕೋರೆಗಾಂವ್ ಯುದ್ಧವು ಬಹುಜನರಿಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ. ತಳಸಮುದಾಯಗಳು ಸಂಘಟನೆಯಾಗದೇ ಬಿಡುಗಡೆ ಇಲ್ಲ, ರಾಜಕೀಯ ಶಕ್ತಿ ಇಲ್ಲದೆ ನ್ಯಾಯ ಇಲ್ಲ ಎಂಬ ಸತ್ಯವನ್ನು ಮನಗಾಣಬೇಕಾಗಿದೆ ಎಂದು ಹೇಳಿದರು.ತಾಲೂಕು ಅದ್ಯಕ್ಷ ಪ್ರಕಾಶ್ ಕೆಸಗೋಡು ಮಾತನಾಡಿ ಇತ್ತೀಚಿಗೆ ಕೆಲ ಶಕ್ತಿಗಳು ಕೋರೆಗಾಂವ್ ಸ್ಮರಣೆಯನ್ನು ಅಪಮಾನಗೊಳಿಸಲು, ಅದನ್ನು “ಬ್ರಿಟಿಷ್ ಪರ” ಎಂದು ಮಸುಕುಗೊಳಿಸಲು ಯತ್ನಿಸುತ್ತಿರುವುದು ಬಹುಜನ ಇತಿಹಾಸವನ್ನು ಅಳಿಸುವ ಸಂಚಾಗಿದೆ. ಕೋರೆಗಾಂವ್ ವಿಜಯೋತ್ಸವವನ್ನು ಸ್ವಾಭಿಮಾನಿಗಳು ಆಚರಣೆ ಮಾಡಬೇಕೇ ವಿನಃ ಗುಲಾಮರು ಆಚರಿಸುವುದು ಶೋಭೆ ತರುವುದಿಲ್ಲ. ಕೋರೆಗಾಂವ್ ಬ್ರಿಟಿಷ್ ವಿಜಯೋತ್ಸವವಲ್ಲ; ಅದು ಜಾತಿವಾದಿ ಬ್ರಾಹ್ಮಣ ಪೇಶ್ವೆಗಳ ಜಾತಿ ಶೋಷಣೆಯ ವಿರುದ್ಧದ ಬಹುಜನರಾದ ಮಹರ್ ಸೈನಿಕರು ಹಾಕಿದ ಸವಾಲು ಎಂದರು. ಈ ಸಂದರ್ಭದಲ್ಲಿ ಬಿಎಸ್ಪಿ ಯ ಜಿಲ್ಲಾ ಕಾರ್ಯದರ್ಶಿಗಳಾದ ರಾಜು ಬೆಳ್ಳೊಟ್ಟೆ, ಎಂ ಜಿ ಕಿರಣ್ ಕುಮಾರ್, ಜಿಲ್ಲಾ ಬಿವಿಎಫ್ ಸಂಯೋಜಕ ಹೇಮಂತ್ ಕುಮಾರ್, ಬಿಎಸ್‌ಪಿ ತಾಲೂಕು ಸಂಯೋಜಕ ಉಮೇಶ್, ಉಪಾಧ್ಯಕ್ಷ ನಿಂಗರಾಜು ಬೆಳ್ಳಾವರ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಮಲ್ಲೇಶ್, ಹೊನ್ನಯ್ಯ, ಕೇಶವ, ನಾಗೇಂದ್ರ, ಮನು, ಅಣ್ಣಪ್ಪ, ನಾಗೇಶ್, ಹೇಮಲತಾ, ಮೂರ್ತಿ, ತಿಮ್ಮಯ್ಯ ಮುಂತಾದವರು ಹಾಜರಿದ್ದರು.