ಆದರ್ಶ ಯೋಜನೆಗೆ ಆಯ್ಕೆಯಾದ ಕೊಟ್ಟೂರು ಸರ್ಕಾರಿ ಪಿಯು ಕಾಲೇಜು

KannadaprabhaNewsNetwork |  
Published : May 28, 2024, 01:02 AM IST
ಕೊಟ್ಟೂರಿನ ಗೊರ್ಲಿ ಶರಣಪ್ಪ ಸರ್ಕಾರಿ ಪಿಯುಸಿ ಕಾಲೇಜ್‌ ಆದರ್ಶ ಕಾಲೇಜ್‌ ಯೋಜನೆಗೆ ಪ್ರಾಪ್ತವಾಗಿದೆ. | Kannada Prabha

ಸಾರಾಂಶ

ಪಿಯು ಮಂಡಳಿಯು ಕಂಪ್ಯೂಟರ್‌ ಇತರ ಸಾಮಗ್ರಿ ಪೂರೈಸಲು ಮುಂದಾಗಿದೆ.

ಕೊಟ್ಟೂರು: ಖಾಸಗಿ ಶಾಲೆಯ ಭರಾಟೆಯ ಪ್ರಚಾರದ ಮಧ್ಯೆ ಪಿಯುಸಿ ವಿದ್ಯಾರ್ಥಿಗಳನ್ನು ಗಮನ ಸೆಳೆಯುತ್ತಿರುವ ಕೊಟ್ಟೂರಿನ ಗೊರ್ಲಿಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ್ನು ಸರ್ಕಾರ ಆದರ್ಶ ಪದವಿ ಪೂರ್ವ ಕಾಲೇಜ್‌ ಎಂದು ಪರಿಗಣಿಸಿದೆ. ಇದಕ್ಕೆಂದೇ ಮೀಸಲಿಟ್ಟಿರುವ ಪ್ರತ್ಯೇಕ ಅನುದಾನವನ್ನು ಬಿಡುಗಡೆಗೊಳಿಸಿದೆ.

ರಾಜ್ಯ ಪಿಯು ಶಿಕ್ಷಣದ ರಾಜ್ಯದ ಇತರ 59 ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಪಿಯು ಶಿಕ್ಷಣ ಇಲಾಖೆ ಆದರ್ಶ ಶಾಲೆಗಳನ್ನಾಗಿ ಘೋಷಿಸಿ ವಿಜ್ಞಾನ ವಿಭಾಗದಲ್ಲಿ ಗಣಕ ವಿಜ್ಞಾನ (ಪಿಸಿಎಂಸಿಎಸ್‌) ಸಂಯೋಜನೆಯನ್ನು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಆಯ್ಕೆಗೊಂಡ ಆದರ್ಶ ಪಿಯು ಕಾಲೇಜುಗಳಿಗೆ ಸೂಚಿಸಿದೆ.ವಿಜ್ಞಾನ ಶಿಕ್ಷಣ ವಿಭಾಗಕ್ಕೆ ಖಾಸಗಿ ಶಾಲೆಯವರು ನೀಡುತ್ತಿರುವ ಪ್ರಾತಿನಿಧ್ಯತೆಯನ್ನು ಸವಾಲಿಗಿರಿಸಿಕೊಂಡು ಇಲಾಖೆ ಸರ್ಕಾರದ ಆಯ್ದ ಪಿಯು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜ್ಞಾನ ವಿಭಾಗದಲ್ಲಿ ಮತ್ತೊಂದು ಗಣಕ ವಿಜ್ಞಾನವನ್ನು ಸಂಯೋಜನೆಗೊಳಿಸಿ ಪ್ರಾರಂಭಿಸುವ ಪ್ರಯತ್ನ ಮಾಡಲಾಗಿದೆ.

ಕೊಟ್ಟೂರಿನಂತೆ ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಯ ಬಳ್ಳಾರಿ, ಸಂಡೂರು, ಸಿರುಗುಪ್ಪ, ಕಂಪ್ಲಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ, ಹೊಸಪೇಟೆ ಸರ್ಕಾರಿ ಪಿಯು ಕಾಲೇಜ್‌ಗಳು ಆದರ್ಶ ಉನ್ನತೀಕರಣ ಕಾಲೇಜಾಗಿ ಪರಿವರ್ತನೆಗೊಂಡಿವೆ. ರಾಜ್ಯದ 60 ಸರ್ಕಾರಿ ಪಿಯು ಕಾಲೇಜ್‌ಗಳನ್ನು ಈ ಕಾರಣಕ್ಕಾಗಿ ಉನ್ನತಿಗೊಳಿಸಲು ಪಿಯು ಮಂಡಳಿ ₹500 ಕೋಟಿ ನಿಗದಿ ಮಾಡಿ ಆಯಾ ಕಾಲೇಜುಗಳಲ್ಲಿನ ಪ್ರಾಚಾರ್ಯರ ಬ್ಯಾಂಕ್‌ ಖಾತೆಗೆ ₹9.8 ಲಕ್ಷ ಜಮೆ ಮಾಡಿದೆ.

ಈ ಅನುದಾನವನ್ನು ಸಂಬಂಧಿತ ಪಿಯುಸಿ ಕಾಲೇಜ್‌ಗಳಲ್ಲಿ ಕಂಪ್ಯೂಟರ್‌ ಸ್ಮಾರ್ಟ್ ಬೋರ್ಡ್‌ನ್ನು ಅಳವಡಿಸಲು ಬಳಸಬಹುದಾಗಿದೆ. ಜತೆಗೆ ಪಿಯು ಮಂಡಳಿಯು ಕಂಪ್ಯೂಟರ್‌ ಇತರ ಸಾಮಗ್ರಿ ಪೂರೈಸಲು ಮುಂದಾಗಿದೆ.

ಸಿಇಟಿ, ನೀಟ್‌ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರಿ ಆದರ್ಶ ಪಿಯು ಕಾಲೇಜ್‌ಗಳಲ್ಲಿ ಕೋಚಿಂಗ್‌ ನೀಡಲು ಅನುವು ಮಾಡಿಕೊಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬಹುಸಂಖ್ಯೆಯ ವಿದ್ಯಾರ್ಥಿಗಳಿಗೆ ಈ ಯೋಜನೆ ಖಂಡಿತ ಸಹಕಾರಿಯಾಗುತ್ತೆಂಬ ಆಶಯವನ್ನು ಪಿಯು ಮಂಡಳಿ ಹೊಂದಿದೆ.

ಕೊಟ್ಟೂರಿನಲ್ಲಿನ ಸರ್ಕಾರಿ ಪಿಯು ಕಾಲೇಜನ್ನು ಪಿಯು ಮಂಡಳಿ ಆದರ್ಶ ಕಾಲೇಜ್‌ ಎಂದು ಆಯ್ಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಉನ್ನತೀಕರಿಸಲು ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ. ಆರ್ಥಿಕವಾಗಿ ಹಿಂದುಳಿದ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ಸಹಕಾರಿಯಾಗುತ್ತದೆ ಎನ್ನುತ್ತಾರೆ ಕೊಟ್ಟೂರು ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಡಾ.ಜಿ. ಸೋಮಶೇಖರ.

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕೊಟ್ಟೂರಿನ ಸರ್ಕಾರಿ ಪಿಯುಸಿ ಕಾಲೇಜ್‌ನ್ನು ಆದರ್ಶ ಕಾಲೇಜಾಗಿ ಪರಿಗಣಿಸಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಮೂಲ ಭೂತ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರ ಮುಂದಾಗಿದೆ. ಇದು ನಿಜಕ್ಕೂ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳು ಈ ಕಾಲೇಜಿನತ್ತ ಆಕರ್ಷಿತರಾಗಲು ಪೂರಕವಾಗಿದೆ ಎನ್ನುತ್ತಾರೆ ಕೊಟ್ಟೂರು ಕಾಲೇಜಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿಶ್‌ ಮಂಜುನಾಥ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ