ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅನ್ನೋದೇನು ಹುಡುಗರ ಆಟನಾ? ತಾನೂ ರಾಜ್ಯಾಧ್ಯಕ್ಷ ಆಗುವೆ ಅಂತಾ ಕುಮಾರ ಬಂಗಾರಪ್ಪ ತಿರುಕನ ಕನಕು ಕಾಣುತ್ತಿದ್ದಾರಷ್ಟೇ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವುದಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ಹೇಳಿದರಾ? ಕುಮಾರ ಬಂಗಾರಪ್ಪಗೆ ಅಧಿಕಾರ ಕೊಟ್ಟವರು ಯಾರು ಎಂದರು.
ಕುಮಾರ ಬಂಗಾರಪ್ಪ ಬಿಜೆಪಿಗೆ ಬಂದು ಎಷ್ಟು ವರ್ಷ ಆಗಿವೆ? ಸೊರಬ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಇದೇ ಕುಮಾರ ಕಾರಣ. ಅಲ್ಲಿನ ಕಾರ್ಯಕರ್ತರನ್ನು ಮುಗಿಸಿದ್ದು ಸಹ ಇದೇ ಕುಮಾರ ಬಂಗಾರಪ್ಪ. ಐದು ವರ್ಷ ಮಂತ್ರಿಯಾಗಿದ್ದಾಗ ಕೇವಲ ಬೆಂಗಳೂರಿಗೆ ಸೀಮಿತವಾಗಿ, ನಿನ್ನದೇ ಸಾಮ್ರಾಜ್ಯ ಮಾಡಿಕೊಂಡಿದ್ಯಲ್ಲಪ್ಪಾ ಎಂದು ರೇಣುಕಾಚಾರ್ಯ ಕುಟುಕಿದರು. ನೀನು ರಾಜ್ಯಾಧ್ಯಕ್ಷ ಆಗುವುದು ತಿರುಕನ ಕನಸು ಅಷ್ಟೇ. ನೀನು ರಾಜ್ಯಾಧ್ಯಕ್ಷನಾಗಿ ಮಧ್ಯ ರಾತ್ರಿ ಕನಸು ಕಂಡಿದ್ದಾ? ಇಂತಹವರು ರಾಜ್ಯಾಧ್ಯಕ್ಷ ಬದಲಾವಣೆ ಅಂತಾ ಮಾತನಾಡುತ್ತಿರುವುದು ಹೋರಿ ಮುಂದೆ ಸಾಗುತ್ತಿದ್ದರೆ, ಹಿಂದೆ ಶ್ವಾನ ಬೊಗಳಿದಂತಿರುತ್ತದೆ. ಬಿ.ವೈ. ವಿಜಯೇಂದ್ರರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ಈ ಬಗ್ಗೆ ಹೆಚ್ಚು ಚರ್ಚೆಯೂ ಬೇಡ ಎಂದರು.
ತಾಪಂ, ಜಿಪಂ, ಮಹಾನಗರ ಪಾಲಿಕೆ, ನಗರಸಭೆ ಹೀಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದೆ. ವಿಜಯೇಂದ್ರ ನಾಯಕತ್ವದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯನ್ನೂ ಎದುರಿಸುತ್ತೇವೆ. ವಾಲ್ಮೀಕಿ ನಿಗಮ, ವಕ್ಫ್ ಭೂ ಕಬಳಿಕೆ, ಮುಡಾ ಸೈಟ್ ಹಗರಣ, ವರ್ಗಾವಣೆ ದಂಧೆ ಹೀಗೆ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಯಲಿಗೆಳೆದು ಹೋರಾಟ ನಡೆಸಿದ್ದು ವಿಜಯೇಂದ್ರ. ಇದೆಲ್ಲಾ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಭಾನುವಾರ ಮಾಜಿ ಶಾಸಕರೆಲ್ಲ ಸಭೆ ಸೇರಿ ಚರ್ಚಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನ ಅದ್ಧೂರಿಯಾಗಿ ಆಚರಿಸುತ್ತೇವೆ. ನಾವ್ಯಾವುದೇ ಬಣವಾಗಿ ಅಲ್ಲ, ಯಡಿಯೂರಪ್ಪನವರ ಅಭಿಮಾನಿ ಬಳಗದಿಂದ ಆಚರಿಸುತ್ತೇವೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜಕೀಯ ಸಮಾವೇಶಗಳಿಗೆ ಅವಕಾಶ ಇಲ್ಲ ಎಂದಿದ್ದಾರೆಯೇ ಹೊರತು, ಜನ್ಮದಿನಾಚರಣೆಗೆ ಅಲ್ಲ. ರಾಷ್ಟ್ರೀಯ ನಾಯಕರನ್ನು ನಾವೆಲ್ಲಾ ಬಳಗದ ಮುಖಂಡರು ಆಹ್ವಾನಿಸಲು ಕಾಲಾವಕಾಶ ನೀಡುವಂತೆ ಕೋರುತ್ತೇನೆ. ಸೋಮವಾರ ರಾತ್ರಿಯೇ ದೆಹಲಿಗೆ ನಾನು ಖಾಸಗಿ ಭೇಟಿ ನೀಡುತ್ತಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.
ಕೋಟ್ ಯಡಿಯೂರಪ್ಪ ರಾಜ್ಯದಲ್ಲಿ ತಳಹಂತದಿಂದ ಪಕ್ಷ ಕಟ್ಟಿದ ಹಿರಿಯ ನಾಯಕ. ಚುನಾವಣಾ ರಾಜಕೀಯದಿಂದ ಬಿಎಸ್‌ವೈ ನಿವೃತ್ತಿ ಆಗಿದ್ದರೂ, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. 2018ರಲ್ಲಿ ಇದೇ ದಾವಣಗೆರೆಯಲ್ಲೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿದ್ದೆವು. ಫೆ.27ರಂದು ಅದಕ್ಕಿಂತ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಮಾಡಿದ್ದೇವೆ. ಯಾರೂ ಇದನ್ನು ವಿರೋಧಿಸುವುದಕ್ಕೆ ಸಾಧ್ಯವಿಲ್ಲ
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ