ಕಡಲೆ ಖರೀದಿಗೆ ಖಾಲಿ ಚೀಲ ಕೊರತೆ ಬಯಲಿನಲ್ಲಿಯೇ ಉಳಿದ ಅನ್ನದಾತರು

KannadaprabhaNewsNetwork |  
Published : Apr 09, 2026, 02:30 AM IST
ದಸಸದ | Kannada Prabha

ಸಾರಾಂಶ

ನಿತ್ಯ ನೂರಾರು ರೈತರು ಮಾರಾಟಕ್ಕೆ ಖರೀದಿ ಕೇಂದ್ರಕ್ಕೆ ಕಡಲೆ ಬೆಳೆ ತರುತ್ತಿದ್ದಾರೆ. ಆದರೆ, ಇಲ್ಲಿ ಖಾಲಿ ಚೀಲಗಳು ಇಲ್ಲವೆಂಬ ನೆಪವೊಡ್ಡಿ ಖರೀದಿ ಸ್ಥಗಿತಗೊಳಿಸಲಾಗಿದೆ.

ಫಕೃದ್ದೀನ್ ಎಂ.ಎನ್

ನವಲಗುಂದ:

ತಾಲೂಕಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರಾರಂಭಿಸಲಾದ ಕಡಲೆ ಖರೀದಿ ಕೇಂದ್ರಗಳಲ್ಲಿ ಖಾಲಿ ಚೀಲ (ಗೋಣಿಚೀಲ) ಗಳ ಕೊರತೆಯಿಂದಾಗಿ ಕಡಲೆ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು ರೈತರು ತೊಂದರೆಗೆ ಸಿಲುಕಿದ್ದಾರೆ.

ನಿತ್ಯ ನೂರಾರು ರೈತರು ಮಾರಾಟಕ್ಕೆ ಖರೀದಿ ಕೇಂದ್ರಕ್ಕೆ ಕಡಲೆ ಬೆಳೆ ತರುತ್ತಿದ್ದಾರೆ. ಆದರೆ, ಇಲ್ಲಿ ಖಾಲಿ ಚೀಲಗಳು ಇಲ್ಲವೆಂಬ ನೆಪವೊಡ್ಡಿ ಖರೀದಿ ಸ್ಥಗಿತಗೊಳಿಸಲಾಗಿದೆ. ಇದರು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು ನಿತ್ಯ ಎಷ್ಟು ಖಾಲಿ ಚೀಲಗಳು ಬೇಕಾಗುತ್ತವೆ ಎಂಬ ಅರಿವು ಅಧಿಕಾರಿಗಳಿಗೆ ಇರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಬೇಜಾಬ್ದಾರಿ ವರ್ತನೆಯಿಂದ ನಾವು ಬಿಸಿಲು, ಮಳೆ ಎನ್ನದೆ ಕಾಯುವಂತಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಮತ್ತಷ್ಟು ಹೊರೆ:ಅಕಾಲಿಕೆ ಮಳೆ, ಕಟಾವು ಸೇರಿದಂತೆ ಈಗಾಗಲೇ ನಮಗೆ ಸಾಕಷ್ಟು ಹಾನಿಯಾಗಿದೆ. ಅಳಿದುಳಿದ ಬೆಳೆಯನ್ನು ಮಾರಾಟಕ್ಕೆ ಟ್ರ್ಯಾಕ್ಟರ್‌, ಆಟೋ ಸೇರಿದಂತೆ ಸರಕು ಸಾಗಣೆ ವಾಹನದಲ್ಲಿ ಇಲ್ಲಿಗೆ ತಂದಿದ್ದೇವೆ. ನಿತ್ಯ ಟ್ರ್ಯಾಕ್ಟರ್‌ಗೆ ₹ 2,500ರಿಂದ ₹ 3000, ಆಟೋಗೆ ₹ 1,500 ಮತ್ತು ಸರಕು ಸಾಗಣೆ ಆಟೋಗೆ ₹ 2,500 ಬಾಡಿಗೆ ನೀಡಬೇಕು. ಇದೀಗ ಖಾಲಿ ಚೀಲಗಳು ಇಲ್ಲದೆ ಇರುವುದರಿಂದ ಖರೀದಿ ಸ್ಥಗಿತಗೊಳಿಸಿದ್ದು ನಾವೇನು ಮಾಡಬೇಕು. ಕಡಲೆ ಮನೆಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಇತ್ತ ನೆಲದ ಮೇಲೆ ಹಾಕಿದರೆ ಮಳೆ ಬರುತ್ತದೆ ಎಂಬ ಭಯವೂ ಕಾಡುತ್ತಿದೆ. ಹಾಗೇ ಬಿಟ್ಟರೆ ವಾಹನದ ಬಾಡಿಗೆಯೂ ಬಾರವಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಚೀಲ ಪೂರೈಸಿ:

ಕಳೆದ ತಿಂಗಳು ಮಳೆ, ಬಿಸಿಲು ಲೆಕ್ಕಸಿದೆ ಬೆಂಬಲ ಬೆಲೆಯಡಿ ಮಾರಾಟ ಮಾಡಲು ನೂಗುನೂಕ್ಕಲು ಇದ್ದರೆ ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿದ್ದೇವೆ. ಇದೀಗ ಮಾರಾಟಕ್ಕೆ ತಂದರೂ ಮಾರುವ ಪರಿಸ್ಥಿತಿ ಇಲ್ಲ. ಕಡಲೆಯೊಂದಿಗೆ ದಿನಗಟ್ಟಲೆ ಕಾಯಬೇಕಿದೆ. ನೀರು, ಊಟ, ಶೌಚಾಲಯದ ವ್ಯವಸ್ಥೆ ಇಲ್ಲದೆ ಬಯಲನ್ನೆ ಆಶ್ರಯಿಸಬೇಕಿದೆ. ಆದಷ್ಟು ಬೇಗ ಅಧಿಕಾರಿಗಳು ಸಮರ್ಪಕ ಚೀಲ ಪೂರೈಸುವ ಮೂಲಕ ನೆರವಿಗೆ ಧಾವಿಸಬೇಕು ಎಂಬುದು ರೈತರ ಒತ್ತಾಯ.

ಮಧ್ಯವರ್ತಿಗಳ ಹಾವಳಿ:ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳ ಕೊರತೆಯಿಂದ ಖರೀದಿ ಪ್ರಕ್ರಿಯೆ ನಿಲ್ಲಿಸಿರುವುದನ್ನೇ ಮಧ್ಯವರ್ತಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಎಷ್ಟು ದಿನ ನೀವು ಹೀಗೆ ವಾಹನದಲ್ಲಿ ಬೆಳೆ ಇಟ್ಟುಕೊಂಡು ಬಾಡಿಗೆ ನೀಡುತ್ತೀರಿ. ಅಧಿಕಾರಿಗಳು ಚೀಲ ತಂದು ಖರೀದಿಸುವುದು ಯಾವಾಗ ಎಂಬಿತ್ಯಾದಿ ಹೇಳುತ್ತಾರೆ. ಜತೆಗೆ ನಮಗೆ ಮಾರಾಟ ಮಾಡಿ ಎಂಬ ಆಮಿಷವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ರೈತರು, ಅಧಿಕಾರಿಗಳೇ ನೇರವಾಗಿ ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ತಕ್ಷಣ ಖಾಲಿ ಚೀಲ ತರಿಸಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಖರೀದಿ ಕೇಂದ್ರಕ್ಕೆ ಕಡಲೆ ತಂದಿದ್ದೇವೆ. ಆದರೆ, ಅಧಿಕಾರಿಗಳು ಖಾಲಿ ಚೀಲ ಇಲ್ಲವೆಂದು ಖರೀದಿ ನಿಲ್ಲಿಸಿದ್ದಾರೆ. ಇದೀಗ ಬೆಳೆಯನ್ನು ವಾಪಸ್‌ ಕೊಂಡೊಯ್ಯಲು ಆಗುತ್ತಿಲ್ಲ. ಅಧಿಕಾರಿಗಳು ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿದ್ದರಿಂದ ರಾತ್ರಿಯಿಡಿ ಕೇಂದ್ರದ ಬಯಲಿನಲ್ಲೇ ಮಲಗಿದ್ದೇವೆ.

ಮಹೇಶ ಬಕ್ಕನ್ನವರ, ತಿರ್ಲಾಪುರ ರೈತಸರ್ಕಾರದ ಬೆಂಬಲ ಬೆಲೆಯಡಿ ನವಲಗುಂದ ತಾಲೂಕಿನಲ್ಲಿ 16 ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಚೀಲಗಳ ಕೊರತೆ ಇದೆ ಎಂಬ ಮಾಹಿತಿ ಬಂದ ತಕ್ಷಣ 12 ಸಾವಿರ ಚೀಲ ಬುಧವಾರ ತರಿಸಲಾಗಿದೆ. ಇನ್ನು ಹೆಚ್ಚಿನ ಚೀಲಗಳ ತರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸುಧೀರ್ ಸಾಹುಕಾರ, ತಹಸೀಲ್ದಾರ್ ನವಲಗುಂದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವದಂಪತಿಗಳು ಅರಿತು ಸುಖ ಸಂಸಾರ ನಡೆಸಿ
ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ನೀಡಬಾರದು: ಹೆಬ್ಬಾರ