ಲಕ್ಷ್ಮೀಸಾಗರ ಕೆರೆ ಸೇತುವೆ ಕುಸಿತ: ಅಧಿಕಾರಿಗಳಿಗೆ ಶಾಸಕರ ತರಾಟೆ

KannadaprabhaNewsNetwork |  
Published : Jun 14, 2026, 01:15 AM IST
೧೩ಕೆಎಲ್‌ಆರ್-೨ಶುಕ್ರವಾರ ಸಂಜೆ ಸುರಿದ ಬಾರಿ ಮಳೆಗೆ ತಾಲ್ಲೂಕಿನ ನರಸಾಪುರ ಹೋಬಳಿಯ ಲಕ್ಷ್ಮೀಸಾಗರ ಕೆರೆಯ ಕೋಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ರಸ್ತೆ ಭಾಗವು ಕುಸಿದು ಬಿದ್ದ ಸ್ಥಳಕ್ಕೆ ಶಾಸಕ ಕೊತ್ತೂರು ಮಂಜುನಾಥ್  ಭೇಟಿ ನೀಡಿ ಪರಿಶೀಲಿಸುತ್ತಿರುವುದು. | Kannada Prabha

ಸಾರಾಂಶ

ಶುಕ್ರವಾರ ಸಂಜೆ ಸುರಿದ ಬಾರಿ ಮಳೆಗೆ ತಾಲೂಕಿನ ನರಸಾಪುರ ಹೋಬಳಿಯ ಲಕ್ಷ್ಮೀಸಾಗರ ಕೆರೆಯ ಕೋಡಿ ಹಳ್ಳದ ಸೇತುವೆಯ ರಸ್ತೆ ಭಾಗವು ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಶುಕ್ರವಾರ ಸಂಜೆ ಸುರಿದ ಬಾರಿ ಮಳೆಗೆ ತಾಲೂಕಿನ ನರಸಾಪುರ ಹೋಬಳಿಯ ಲಕ್ಷ್ಮೀಸಾಗರ ಕೆರೆಯ ಕೋಡಿ ಹಳ್ಳದ ಸೇತುವೆಯ ರಸ್ತೆ ಭಾಗವು ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ವೇಳೆ ಕಾಮಗಾರಿಯ ವೈಫಲ್ಯದ ಕುರಿತು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.

ಸೇತುವೆಯ ಪಕ್ಕದ ರಸ್ತೆ ಮತ್ತು ರಿಟೈನಿಂಗ್ ವಾಲ್ (ರಕ್ಷಣಾ ಗೋಡೆ) ಕುಸಿದಿರುವುದನ್ನು ಕಂಡು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸ್ಥಳದಲ್ಲಿದ್ದ ಎಂಜಿನಿಯರ್ ಬಳಿ ಮಾಹಿತಿ ಪಡೆದುಕೊಂಡರು. ಈ ವೇಳೆ ವಿವರಣೆ ನೀಡಿದ ಎಂಜಿನಿಯರ್ ಕೆರೆಯಿಂದ ಹರಿದು ಬರುತ್ತಿರುವ ನೀರಿನ ರಭಸಕ್ಕೆ ಇಲ್ಲಿನ ಕೆಳಭಾಗದ ಮಣ್ಣು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಮಣ್ಣು ಕುಸಿದಿದ್ದರಿಂದ ರಸ್ತೆಯೂ ಕುಸಿದು ಬಿದ್ದಿದೆ ಎಂದು ಸಮರ್ಥನೆ ನೀಡ ತೊಡಗಿದರು. ಇದಕ್ಕೊಪ್ಪದ ಶಾಸಕ ಕೊತ್ತೂರು ಮಂಜುನಾಥ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಣ್ಣು ಕೊಚ್ಚಿ ಹೋಗುವಾಗ ನೀವು ಏನು ಮಾಡುತ್ತಿದ್ದೀರಿ? ಕಾಮಗಾರಿ ಮಾಡುವಾಗಲೇ ಸರಿಯಾದ ಮುನ್ನೆಚ್ಚರಿಕೆ ವಹಿಸಬೇಕಿತ್ತಲ್ಲವೇ? ಗುಣಮಟ್ಟದ ಕೆಲಸ ನಡೆದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸೇತುವೆ ಹಾಗೂ ರಸ್ತೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಯಾರು? ತಕ್ಷಣವೇ ಅವರ ಮೇಲೆ ಕ್ರಮ ಕೈಗೊಳ್ಳಿ. ಇಂತಹ ಬೇಜವಾಬ್ದಾರಿ ಕೆಲಸ ಮಾಡಿರುವ ಗುತ್ತಿಗೆದಾರನನ್ನು ತಕ್ಷಣವೇ ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶಾಸಕರು ಆದೇಶಿಸಿದರು.

ಶಾಸಕರು ಕೇವಲ ಎಚ್ಚರಿಕೆ ನೀಡದೇ ಸ್ಥಳದಲ್ಲಿದ್ದ ತಾಂತ್ರಿಕ ಲೋಪಗಳನ್ನು ಎತ್ತಿ ತೋರಿಸಿದರು. ನೀರು ಹರಿದು ಹೋಗುವ ಜಾಗದಲ್ಲಿ ಸರಿಯಾದ ಕಾಂಕ್ರೀಟ್ ಬೆಡ್ ಅಥವಾ ರಕ್ಷಣಾತ್ಮಕ ಗೋಡೆಗಳನ್ನು ಗಟ್ಟಿಯಾಗಿ ನಿರ್ಮಿಸಿದ್ದರೆ ಮಣ್ಣು ಕೊಚ್ಚಿ ಹೋಗುವುದು ಸಾಮಾನ್ಯ ಜ್ಞಾನ. ಎಂಜಿನಿಯರ್ ಆಗಿ ನಿಮಗಿದು ತಿಳಿಯುವುದಿಲ್ಲವೇ? ಎಂದು ಪ್ರಶ್ನಿಸಿದರು. ಅಲ್ಲದೆ, ಇನ್ನು ಮುಂದೆ ಇಂತಹ ಲೋಪಗಳು ಮರುಕಳಿಸಿದರೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಳ್ಳಿ ಮುರಳಿ, ಕಾಂಗ್ರೆಸ್ ಮುಖಂಡ ಲಕ್ಷ್ಮೀಸಾಗರ ಜಿ.ಸುನಿಲ್ ಕುಮಾರ್, ಮಾಲ್ಗುಡಿ ನಾರಾಯಣಸ್ವಾಮಿ, ಎ.ಶಂಕರ್, ಬಿ.ಶಂಕರ್, ಜಾಲಿ ಮಂಜು, ರಾಮಸಂದ್ರ ಶಿವಕುಮಾರ್, ಮನೋಹರ್, ಎಂವಿಜೆ ಮಂಜು, ಬಸವರಾಜು, ಗೋಪಣ್ಣ, ಮಹೇಶ್, ಶ್ರೀಕಾಂತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂಪ್ಲಾಂಟ್ ಗರ್ಭ ತಡೆ ಸುಲಭ ವಿಧಾನ
ಪ್ರಧಾನ ಮಂತ್ರಿ ಯೋಜನೆಗಳ ಜಾರಿಯಲ್ಲಿ ಚಿತ್ರದುರ್ಗ ಕಡೇ ಸ್ಥಾನ