ಈರಣ್ಣ ಬುಡ್ಡಾಗೋಳ
ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಒದಗಿಸುವ ನಿರೀಕ್ಷೆಯಲ್ಲಿ ನಿರ್ಮಾಣಗೊಂಡಡಿರುವ ಮಿನಿ ವಿಧಾನಸೌಧ ಲೋಕಾರ್ಪಣೆಗೆ ಒಂದೂವರೆ ದಶಕ ಕಳೆದಿದೆ. ಆದರೆ, ಇದುವರೆಗೂ ಕಟ್ಟಣ ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಸಂಬಂಧಿಸಿದ ಇಲಾಖೆಗೆ ಕಟ್ಟಡದ ಹಸ್ತಾಂತರ ಮಾತ್ರ ಇನ್ನೂ ನೆನೆಗುದಿಗೆ ಬಿದ್ದಿದೆ. ಇದರ ಪರಿಣಾಮ ಮಿನಿ ವಿಧಾನಸೌಧದ ನಿರ್ವಹಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಗೆ ನಿರ್ವಹಣೆ ಮಾಡಲಾಗದೇ ಬಾಯೊಳಗಿನ ಬಿಸಿ ತುಪ್ಪ ನುಂಗದಂತಾಗಿದೆ.
2009ರಲ್ಲಿ ₹3 ಕೋಟಿ ವೆಚ್ಚದ ಮಿನಿ ವಿಧಾನ ಸೌಧ ಲೋಕಾರ್ಪಣೆ:ಬೆಳಗಾವಿ ಜಿಲ್ಲೆಯ ಹಿಂದುಳಿದ ತಾಲೂಕು ರಾಮದುರ್ಗದ ಮಿನಿ ವಿಧಾನಸೌಧ ಕಟ್ಟಡದ ಒಂದೂವರೆ ದಶಕದ ಕಥೆ ಇದು. ಕಳೆದ 2006ರಲ್ಲಿ ರಾಜ್ಯ ಕಂದಾಯ ಇಲಾಖೆಯ ಕಾರ್ಯದರ್ಶಿಗಳಾಗಿದ್ದ, ತಾಲೂಕಿನವರೂ ಆಗಿದ್ದ ಎಸ್.ಎಂ.ಜಾಮದಾರ ಮತ್ತು ಅಂದಿನ ಶಾಸಕ ಮಹಾದೇವಪ್ಪ ಯಾದವಾಡರ ಪ್ರಯತ್ನದ ಫಲವಾಗಿ ಮಿನಿವಿಧಾನ ಸೌಧ ನಿರ್ಮಾಣವಾಗಿದೆ. ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮಿನಿ ವಿಧಾನಸೌಧ ಕಟ್ಟಡವನ್ನು 2009ರ ಫೆ.13 ರಂದು ಲೋಕಾರ್ಪಣೆಗೊಳಿಸಲಾಯಿತು. ಆಗಿನಿಂದ ಪ್ರಮುಖ ಇಲಾಖೆಗಳಾದ ತಹಸೀಲ್ದಾರ್ ಕಚೇರಿ, ಉಪ ಖಜಾನೆ, ಉಪ ನೋಂದಣಿ, ಸಿಡಿಪಿಒ, ಸಮಾಜ ಕಲ್ಯಾಣ ಇಲಾಖೆ, ಭೂ ಮಾಪನ, ನಗರ ಭೂ ದಾಖಲೆ ಸೇರಿದಂತೆ ಹಲವು ಇಲಾಖೆಗಳು ಸ್ಥಳಾಂತರವಾಗಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಆದರೆ, ಮಿನಿ ವಿಧಾನಸೌಧದಲ್ಲಿ ಬಹುತೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಇದರ ನಿರ್ವಹಣೆ ಮಾತ್ರ ಯಾವುದೇ ಇಲಾಖೆಗಳು ವಹಿಸಿಕೊಂಡಿಲ್ಲ ಎನ್ನುವುದೇ ವಿಪರ್ಯಾಸ. ಈ ಬಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಕೇಳಿದರೇ ನಿರ್ಮಾಣ ಮಾಡಿರುವ ಗೃಹ ನಿರ್ಮಾಣ ಮಂಡಳಿ ಇದುವರೆಗೆ ಕಟ್ಟಡವನ್ನು ನಮಗೆ ಹಸ್ತಾಂತರವನ್ನೇ ಮಾಡಿಲ್ಲ. ಆದ್ದರಿಂದ ನಿರ್ವಹಣೆಗೆ ತೊಂದರೆಯಾಗಿದೆಂಬ ಸಿದ್ಧ ಉತ್ತರ ಹೇಳುತ್ತಾರೆ. ಗೃಹ ನಿರ್ಮಾಣ ಮಂಡಳಿ ಮಾತ್ರ 2008ರ ನವೆಂಬರ್‌ನಲ್ಲಿ ಕಟ್ಟಡ ಕಾಮಗಾರಿ ಮುಗಿದಿದ್ದು, ಹಸ್ತಾಂತರ ಮಾಡಲಾಗಿದೆಂದು ಹೇಳುತ್ತಾರೆ. ಆದರೆ, ತಹಸೀಲ್ದಾರ್ ಕಚೇರಿಯಲ್ಲಿ ಹಸ್ತಾಂತರ ಮಾಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ. ಕಟ್ಟಡವನ್ನು ಹಸ್ತಾಂತರ ಮಾಡದ ಮತ್ತು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧದ ದಕ್ಷಿಣದ ಮೊದಲ ಮಹಡಿಯಲ್ಲಿ ಕಂದಾಯ ಇಲಾಖೆಯ ಕೆಲಸ ಮಾಡುವ ಕೆಲ ಕೊಠಡಿಗಳು, ನಗರ ಭೂ ಮಾಪನ ಕಚೇರಿ, ನೆಲ ಮಹಡಿಯ ಇ ಆಡಳಿತ ಕೊಠಡಿ ಸೇರಿದಂತೆ ಹಲವು ಕೊಠಡಿಗಳು ಮಳೆ ಬಂದರೇ ಸೋರುವ ಮೂಲಕ ಮಿನಿಕೆರೆ ಪ್ರತ್ಯಕ್ಷವಾಗುತ್ತದೆ.
ಶೌಚಾಲಯಕ್ಕೆ ನೀರಿಲ್ಲದೇ ಬೀಗ: ನಿತ್ಯವೂ ಪರದಾಟ
ಬಾಕ್ಸ್
ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಬಹುತೇಕ ಮಿನಿ ವಿಧಾನಸೌಧಗಳು ನಿರ್ಮಾಣ ಮಾಡಿರುವ ಸಂಸ್ಥೆಗಳಿಂದ ಇನ್ನು ಹಸ್ತಾಂತರವಾಗಿಲ್ಲ. ಬೈಲಹೊಂಗಲ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಯಾವ ವಿಭಾಗವು ಇಲ್ಲ. ಅಲ್ಲಿ ಕೇವಲ ಉಪಖಜಾನೆ, ಉಪನೋಂದಣಿ ಕಚೇರಿಗಳಿವೆ. ಚನ್ನಮ್ಮನ ಕಿತ್ತೂರನಲ್ಲಿ ಉಪಖಜಾನೆಯ ಲಾಕರ್ ಇಲ್ಲದಿರುವ ಪರಿಣಾಮ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆಗಳನ್ನು ಬೈಲಹೊಂಗಲ ಉಪಖಜಾನೆಯಲ್ಲಿ ಇಡಲಾಗುತ್ತದೆಂಬ ಮಾಹಿತಿ ಇದೆ.
ರಾಮದುರ್ಗದ ಮಿನಿ ವಿಧಾನಸೌಧ ಗೃಹ ನಿರ್ಮಾಣ ಮಂಡಳಿಯಿಂದ ತಹಸೀಲ್ದಾರ್‌ರಿಗೆ ಹಸ್ತಾಂತರವಾಗಿರುವ ಬಗ್ಗೆ ಯಾವದೇ ಮಾಹಿತಿ ಇಲ್ಲ. ಹಸ್ತಾಂತರ ಆಗಿರದಿದ್ದರೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿಸಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು.
------
-ಮಹಾದೇವಪ್ಪ ಯಾದವಾಡ, ಮಾಜಿ ಶಾಸಕರು.