ಗಣಿತದ ಪರಿಕಲ್ಪನೆಗಳ ಅನ್ವಯಗಳ ಮೂಲಕ ಗಣಿತ ಕಲಿಯಿರಿ

KannadaprabhaNewsNetwork | Published : Nov 29, 2024 1:01 AM

ಸಾರಾಂಶ

ಗಣಿತದಲ್ಲಿ ಶೂನ್ಯದ ಕೊಡುಗೆ ಹೆಚ್ಚಿನ ಮಹತ್ವ ಹೊಂದಿದ್ದು ಇದಕ್ಕೆ ಪುಷ್ಟಿ ನೀಡುವಂಥ ಸಂಸ್ಕೃತ ಶ್ಲೋಕಗಳಲ್ಲಿ ಅಡಗಿರುವ ಗಣಿತದ ಲೆಕ್ಕಾಚಾರಗಳನ್ನು ಕಾಣಬಹುದು. ವೇದ ಗಣಿತವು ಗಣಿತವನ್ನು ಸುಲಭವಾಗಿ ಅರ್ಥೈಸುತ್ತದೆ.

ಧಾರವಾಡ:

ವಿದ್ಯಾರ್ಥಿಗಳಿಗೆ ಗಣಿತದ ಪರಿಕಲ್ಪನೆಗಳ ಅನ್ವಯಗಳನ್ನು ಸುಲಭವಾಗಿ ತಿಳಿಸಿಕೊಟ್ಟರೆ ಗಣಿತ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದು ಕರ್ಶಜ್ಞಾನ ಫೌಂಡೇಶನ್‌ ಸಂಸ್ಥಾಪಕಿ ಸುಮಂಗಲಾ ದಾಂಡೇವಾಲೆ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರಿಗೆ ಆಯೋಜಿಸಿದ್ದ ಮಾದರಿ ತಯಾರಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಗಣಿತ ನಮ್ಮ ಪೂರ್ವಜರ ಕಾಲದಿಂದಲೂ ಬಳಕೆಯಲ್ಲಿದೆ. ಗಣಿತ ಲೋಕಕ್ಕೆ ಭಾರತೀಯರ ಕೊಡುಗೆ ಅಪಾರ ಎಂದರು.

ಗಣಿತದಲ್ಲಿ ಶೂನ್ಯದ ಕೊಡುಗೆ ಹೆಚ್ಚಿನ ಮಹತ್ವ ಹೊಂದಿದೆ. ಇದಕ್ಕೆ ಪುಷ್ಟಿ ನೀಡುವಂಥ ಸಂಸ್ಕೃತ ಶ್ಲೋಕಗಳಲ್ಲಿ ಅಡಗಿರುವ ಗಣಿತದ ಲೆಕ್ಕಾಚಾರಗಳನ್ನು ಕಾಣಬಹುದು. ವೇದ ಗಣಿತವು ಗಣಿತವನ್ನು ಸುಲಭವಾಗಿ ಅರ್ಥೈಸುತ್ತದೆ ಎಂದು ಹೇಳಿದರು.

ಗಣಿತ ವಿಷಯ ಪರಿವೀಕ್ಷಕ ಯಲ್ಲಪ್ಪ ಹುಬ್ಬಳ್ಳಿ, ಗಣಿತವು ಕಬ್ಬಿಣದ ಕಡಲೆ ಅಲ್ಲವೇ ಅಲ್ಲ. ಬಹಳ ಸರಳ ಹಾಗೂ ಅತ್ಯಂತ ಸುಲಭದ ವಿಷಯ. ಇಂದು ತಂತ್ರಜ್ಞಾನವು ಬಹಳಷ್ಟು ಮುಂದುವರಿದಿದೆ. ಗಣಿತದ ಮಾದರಿ ಬಳಸಿ ಸರಳ ವಿಧಾನದ ಮೂಲಕ ಗಣಿತದ ತತ್ವ ಹಾಗೂ ಪರಿಕಲ್ಪನೆ ಸುಲಭಗೊಳಿಸಿದರೆ ವಿದ್ಯಾರ್ಥಿಗಳು ಗಣಿತದಲ್ಲಿ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಶಿಕ್ಷಕರು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಡಿ. ಬೋಳಿಶೆಟ್ಟಿ, ಗಣಿತದ ಉಪನ್ಯಾಸಕ್ಕಿಂತ ಹೆಚ್ಚು ಮಾದರಿಗಳ ಮೂಲಕ ವಿವರಣೆ ಮಾಡುವ ಪದ್ಧತಿಯನ್ನು ಶಿಕ್ಷಕರು ಅಳವಡಿಸಿಕೊಂಡರೆ ಗಣಿತವು ಅತ್ಯಂತ ಸುಲಭದ ವಿಷಯವಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಶಂಭು ಎಸ್. ಕೊಳದುರ್ಗಿ ಇದ್ದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಚಂದ್ರಕಾಂತ ಚಂಡೂರ ವಂದಿಸಿದರು.

Share this article