ಜೆಡಿಎಸ್‌ ಮತ್ತು ಬಿಜೆಪಿಗೆ 150 ಸೀಟು ಬಂದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ : ನಿಖಿಲ್

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 11:17 AM IST
18 | Kannada Prabha

ಸಾರಾಂಶ

ದರ್ಪ, ದೌರ್ಜನ್ಯ ಮಾಡುವುದನ್ನು ಬಿಡಿ. ನಾಳೆ ಏನಾದರೂ ವಿಧಾನಸಭಾ ಚುನಾವಣೆ ಘೋಷಣೆಯಾದರೆ ದುರ್ಬೀನ್‌ ಹಾಕಿ ಕಾಂಗ್ರೆಸ್‌ ಶಾಸಕರನ್ನು ಹುಡುಕುವ ಸ್ಥಿತಿಗೆ ಬರುತ್ತದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭವಿಷ್ಯ ನುಡಿದರು.

 ಮಂಡ್ಯ :  ಆಡಳಿತದಲ್ಲಿದ್ದೇವೆ ಎಂಬ ಕಾರಣಕ್ಕೆ ದುರಹಂಕಾರ, ದರ್ಪ, ದೌರ್ಜನ್ಯ ಮಾಡುವುದನ್ನು ಬಿಡಿ. ನಾಳೆ ಏನಾದರೂ ವಿಧಾನಸಭಾ ಚುನಾವಣೆ ಘೋಷಣೆಯಾದರೆ ದುರ್ಬೀನ್‌ ಹಾಕಿ ಕಾಂಗ್ರೆಸ್‌ ಶಾಸಕರನ್ನು ಹುಡುಕುವ ಸ್ಥಿತಿಗೆ ಬರುತ್ತದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜೆಡಿಎಸ್‌ ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂಬುವ ಹೇಳಿಕೆ ನೀಡಿ ಮಾರನೇ ದಿನ ಛತ್ರಿ ಎಂದರೆ ಪ್ರಬುದ್ಧರು ಬುದ್ದಿವಂತರು ಎಂಬುವ ಮಾತನ್ನು ಹೇಳುತ್ತೀರಾ ಡಿ.ಕೆ.ಶಿವಕುಮಾರ್‌ ಅವರೇ. ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಈ ಜಿಲ್ಲೆಯ ಜನರು ಪ್ರಬುದ್ಧರಿದ್ದಾರೆ ಯಾವಾಗ ಅಥವಾ ಯಾವ ಸಂದರ್ಭದಲ್ಲಿ ಮೇಲಕ್ಕೆ ಎತ್ತಬೇಕು ಹಾಗೂ ಕೆಳಕ್ಕೆ ಬೀಳಿಸಬೇಕೆಂದು ಅರಿತಿದ್ದಾರೆ. ನಿಮ್ಮ ಆಟ ಇಲ್ಲಿ ನಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೋವಿದೆ. ನಮ್ಮ ಕಾರ್ಯಕರ್ತರಿಗೆ ಯಾವುದೇ ಹುದ್ದೆಯನ್ನು ನೀಡಿಲ್ಲ ಎನ್ನುವ ಸಂಕಟವನ್ನು ದೂರ ಮಾಡಲು ನಾವು ನೀವೆಲ್ಲ ಜೊತೆಯಲ್ಲಿ ನಡೆಯೋಣ. ನಮ್ಮ ಜೆಡಿಎಸ್‌ ಮತ್ತು ಬಿಜೆಪಿ ನೇತೃತ್ವದಲ್ಲಿ 150 ಸೀಟುಗಳು ರಾಜ್ಯದಲ್ಲಿ ಬಂದು ಮತ್ತೊಮ್ಮೆ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರ ಜೊತೆ ಹೆಜ್ಜೆ ಹಾಕುವ ಮೂಲಕ ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಲು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಜನರೊಂದಿಗೆ ಜನರಿಗಾಗಿ ಇರುವ ಜನತಾ ದಳವು ಪ್ರತಿಯೊಬ್ಬ ಕಾರ್ಯಕರ್ತರ ಜೊತೆ ಚರ್ಚೆ ಮಾಡುವುದು ಮತ್ತು ಅವರ ಮನೆಗೆ ಹೋಗಿ ಅವರ ಆತಿಥ್ಯವನ್ನು ಸ್ವೀಕರಿಸಿ ಅವರ ಜೊತೆ ನಾವಿದ್ದೇವೆ ಎಂಬುದನ್ನು ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಇಲ್ಲಿ ಪ್ರಶ್ನೆ ಬರಬಹುದು ಚುನಾವಣೆ ಇನ್ನೂ ಮೂರು ವರ್ಷವಿದೆ ಆಗಲೇ ಸಂಘಟನೆಗೆ ನಿಂತಿದ್ದಾರಾ ಎಂಬುದನ್ನು ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎನ್ನವುದೊಂದೇ ಉದ್ದೇಶವಾಗಿದೆ ಎಂದರು.

ರಾಜಕೀಯ ಷಡ್ಯಂತ್ರದಿಂದ 2019ರಲ್ಲಿ ನನ್ನ ಸೋಲಾಗಿತ್ತು. ಅದನ್ನು ಮೀರಿ ನನ್ನ ಮಂಡ್ಯ ಜಿಲ್ಲೆಯ ಲಕ್ಷಾಂತರ ಮತದಾರರು ಎಚ್‌.ಡಿ.ಕುಮಾರಸ್ವಾಮಿ ಅವರ ಬಹುಮತ ಕೊಟ್ಟು ಜಯಭೇರಿ ಬಾರಿಸುವಂತೆ ಮಾಡಿದ್ದೀರಾ. ಇದನ್ನು ಮರೆಯಲು ಸಾಧ್ಯವಿಲ್ಲ. ನಾವು ನಿಮ್ಮ ಮನೆಯ ಮಕ್ಕಳಾಗಿ ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದರು.

ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಡಿಜಿಟಲ್‌ ಮೂಲಕ ಜೆಡಿಎಸ್‌ ಸದಸ್ಯತ್ವಕ್ಕೆ ನಿಖಿಲ್‌ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಅದಕ್ಕೆ ನಾವು ನೀವು ಎಲ್ಲರೂ ಬೆಂಬಲವಾಗಿ ನಿಂತು ಪಕ್ಷದ ಬಲವರ್ಧನೆಗೆ ಮುಂದಾಗೋಣ. ಮುಖ್ಯಮಂತ್ರಿಗೆ ಅವಮಾನ ಮಾಡಿದರೆ ರಾಜ್ಯಕ್ಕೆ ಅವಮಾನ. ಆದರೆ, ಜಿಲ್ಲಾ ಸಂಸದರಿಗೆ ಅವಮಾನ ಮಾಡಿದರೆ ಜಿಲ್ಲೆಗೆ ಅವಮಾನ ಆಗಲಿದೆ. ನಮ್ಮ ಪಕ್ಷವನ್ನು ಬಗ್ಗು ಬಡಿಯುವ ಕೆಲಸವನ್ನು ಕಾಂಗ್ರೆಸ್‌ನ ಎಲ್ಲ ಶಾಸಕರು ಮಾಡುತ್ತಿದ್ದಾರೆ. ಸ್ಟೇಷನ್‌, ಕಚೇರಿಗಳಲ್ಲಿ ಕಾಂಗ್ರೆಸ್ ಏಜೆಂಟ್‌ಗಳೇ ತುಂಬಿ ತುಳುಕುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಈ ಜಿಲ್ಲೆಯಲ್ಲಿ ಎಚ್‌.ಡಿ.ದೇವೇಗೌಡ ಅವರು ಸ್ಥಾಪಿಸಿರುವ ಹಾಗೂ ಗ್ರಾಮ ವಾಸ್ತವ್ಯ ಹೂಡಿ ಪಕ್ಷ ಬೆಳೆಸಿರುವ ಎಚ್.ಡಿ.ಕುಮಾರಸ್ವಾಮಿ ಅವರ ಸಂಘಟನೆಯ ಮೂಲಕ ಜೆಡಿಎಸ್‌ ಪಕ್ಷ ಬೆಳೆಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಎಚ್‌ಡಿಡಿ ಮತ್ತು ಎಚ್‌ಡಿಕೆ ಅವರ ಉಸಿರು ಇರೋವರೆಗೂ ಪಕ್ಷವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ನಮ್ಮ ಪಕ್ಷ ಬಹಳ ಶಕ್ತಿಯುತವಾಗಿದೆ ಎಂಬುದನ್ನು ಮಂಡ್ಯ ಜಿಲ್ಲೆಯೇ ಸಾಕ್ಷಿಯಾಗಿದೆ ಎಂದರು.

ನಾಗಮಂಗಲದಲ್ಲಿ ಜೆಡಿಎಸ್‌ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಎಂತಹ ರಾಜಕಾರಣ ಮಾಡುತ್ತಾರೆ ನೋಡಿ. ಇಂದು ಈ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಾಮರ್ದ ರಾಜಕಾರಣವಾಗಿದೆ. ಅದನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದು, ಇದನ್ನು ನಾವು ಮೆಟ್ಟಿ ನಿಲ್ಲುತ್ತೇವೆ ಎಂದರು.

ಕಾಂಗ್ರೆಸ್‌ಗೆ ಒಂದು ಕಾನೂನು ಮತ್ತೆ ಸಂವಿಧಾನವಿದೆ. ನಮ್ಮ ತಾಲೂಕಿನಲ್ಲಿ ಒಬ್ಬ ಪುಣ್ಯಾತ್ಮ ಗೆದ್ದಿದ್ದಾನೆ. ನನ್ನನ್ನು ಕೀಳಾಗಿ ಮಾತನಾಡುವುದೇ ಅವರ ಸಾಧನೆಯಾಗಿ ಇಸ್ಪೀಟ್‌ ಆಟ ಆಡುವ ಮಹಾನ್‌ ದುರಹಂಕಾರಿ. ಇವನಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ‍ಪಿ.ಎಂ.ನರೇಂದ್ರಸ್ವಾಮಿ ಅವರ ಹೆಸರು ಹೇಳದೇ ತಿವಿದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌, ಜೆಡಿಎಸ್‌ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್‌, ನಗರಸಭೆ ಅಧ್ಯಕ್ಷ ಪ್ರಕಾಶ್‌, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಮುಖಂಡರಾದ ಅಮರಾವತಿ ಚಂದ್ರಶೇಖರ್‌, ಸಿದ್ದರಾಮಯ್ಯ, ರವಿ, ತಿಮ್ಮಯ್ಯ, ಜಯರಾಮ್‌, ಮಹಮದ್‌, ಪುಟ್ಟಸ್ವಾಮಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ