ನರಗುಂದ: ಬರೀ ರಾಜಕಾರಣಿಗಳ ಟೀಕಿಸುವ ಕೆಲಸ ಆಗದೇ, ಸಮಾಜದ ಅಂಕುಡೊಂಕುಗಳ ತಿದ್ದುವ ಕೆಲಸ ಪತ್ರಿಕೆಗಳಿಂದ ಆಗಬೇಕಾಗಿದೆ. ಇತ್ತೀಚೆಗೆ ಯೂಟ್ಯೂಬರ್ ಹಾವಳಿ ಹೆಚ್ಚಾಗಿದ್ದರಿಂದ ಸಮಾಜದ ವ್ಯವಸ್ಥೆ ಕೆಡುತ್ತಿದೆ. ಇದು ಸರಿಯಾಗಬೇಕಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಪತ್ರಿಕೆಗಳು ದ್ವೇಷವನ್ನು ಇಟ್ಟುಕೊಂಡು ಕಾರ್ಯ ಮಾಡದೇ ಸಮಾಜ ಸುಧಾರಣೆ ವಿಷಯಗಳು ಸಾಕಷ್ಟಿವೆ. ಆ ದಿಕ್ಕಿನಲ್ಲಿ ಪತ್ರಿಕೆಗಳು ಹೆಜ್ಜೆ ಇಡಬೇಕು. ಬರೀ ಟೀಕೆಗಳನ್ನೇ ಮಾಡುತ್ತಾ ಹೋದರೆ ಒಳ್ಳೆಯದನ್ನು ಎಲ್ಲಿ ಹುಡುಕುವುದು? ಸಮಾಜದಲ್ಲಿ ಮಕ್ಕಳ ಪಾತ್ರ ಏನು ಎಂಬುದನ್ನು ಪತ್ರಿಕೆಗಳ ಮುಖಾಂತರ ಪ್ರಸ್ತುತಪಡಿಸಬೇಕಾಗಿದೆ ಎಂದರು.ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ 50 ವರ್ಷದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಈ ಯೋಜನೆ ಜಾರಿ ಮಾಡಿಸಿ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಘೋಷಿಸಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ನಾಡಿನ ರೈತರು ಕಳೆದ 40 ವರ್ಷದಿಂದ ಕುಡಿಯುವ ನೀರಿನ ಯೋಜನೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಸುದೀರ್ಘ ಹೋರಾಟ ಮಾಡುತ್ತಿದ್ದಾರೆ. ಮೇಲಾಗಿ ಈ ಹೋರಾಟದಲ್ಲಿ ಹಲವಾರು ರೈತರು ಜೀವ ಕಳೆದುಕೊಂಡಿದ್ದಾರೆ. ಈ ರೈತರಿಗೆ, ಹೋರಾಟಕ್ಕೆ ಕೀರ್ತಿ ಬರಬೇಕೆಂದರೆ ಯೋಜನೆ ಜಾರಿಯಾದರೆ ಮಾತ್ರ ಗೌರವ ಬರುತ್ತದೆ ಎಂದರು.ವರದಶ್ರೀ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿದರು. ವೇದಿಕೆಯಲ್ಲಿ 2025- 28ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡ ತಾಲೂಕಾಧ್ಯಕ್ಷ ಸಂಗನಗೌಡ ಖಾನಪ್ಪಗೌಡ್ರ, ಉಪಾಧ್ಯಕ್ಷ ಪ್ರಭು ಗುಡಾರದ, ಪ. ಕಾರ್ಯದರ್ಶಿ ರಾಜು ಹೊಸಮನಿ, ಕಾರ್ಯದರ್ಶಿ ಉಮೇಶ ಬೋಳಶೆಟ್ಟಿ, ಖಜಾಂಚಿ ಎಸ್.ಎಸ್. ಮಣ್ಣೂರಮಠ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಅವರು ಪ್ರತಿಜ್ಞಾವಿಧಿ ಭೋದಿಸಿದರು.ನಂತರ ತಾಲೂಕಿನ ಪತ್ರಿಕಾ ವಿತರಿಕರನ್ನು ಸನ್ಮಾನಿಸಲಾಯಿತು ಮತ್ತು 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ದನಕರುಗಳಿಗೆ ಉಚಿತವಾಗಿ ಆರೋಗ್ಯ ಚಿಕಿತ್ಸೆ ನೀಡುತ್ತಿರುವ ಚಿಕ್ಕನರಗುಂದ ಗ್ರಾಮದ ಬಾಚಿ ರೈತನನ್ನು ಮತ್ತು ದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡನಲ್ಲಿ ಭಾಗವಹಿಸಿದ ಎನ್‌ಸಿಸಿ ಕ್ಯಾಡೆಟ್‌ಗಳನ್ನು ಸನ್ಮಾಸಲಾಯಿತು.