ಚನ್ನಪಟ್ಟಣ: ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆಯುತ್ತಿರುವ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ರಾಮನಗರ ನೆಟ್ ಬಾಲ್ ಅಸೋಸಿಯೇಷನ್ ಮಹಿಳಾ ಮತ್ತು ಪುರುಷರ ತಂಡಕ್ಕೆ ರೋಟರಿ ಟಾಯ್ಸ್ ಸಿಟಿ ಶಾಖೆಯಿಂದ ಟೀ ಶರ್ಟ್, ಕ್ರೀಡಾ ಸಮವಸ್ತ್ರ ಸೇರಿದಂತೆ ಕ್ರೀಡೋಪಕರಣಗಳನ್ನು ವಿತರಿಸಿ ಶುಭ ಹಾರೈಸಲಾಯಿತು. ಚನ್ನಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಶುಭ ಹಾರೈಸಿ ಮಾತನಾಡಿದ ರೋಟರಿ ಟಾಯ್ಸ್ ಸಿಟಿ ಶಾಖೆಯ ನಿಕಟ ಪೂರ್ವ ಅಧ್ಯಕ್ಷ ಬೈ ಶ್ರೀನಿವಾಸ್, ಯುವ ಜನತೆ ಕ್ರೀಡೆಗಳಲ್ಲಿ ಭಾಗಿಯಾಗುವುದನ್ನು ರೂಢಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು ಭಾಗವಹಿಸುವಿಕೆ ಮುಖ್ಯ ಎಂದು ಅರಿಯಬೇಕು ಎಂದರು. ರೋಟರಿ ಟಾಯ್ಸ್ ಸಿಟಿ ಶಾಖೆ ಅಧ್ಯಕ್ಷ ಶೇಖರ್ ಲಾಡ್ ಮಾತನಾಡಿ, ನಮ್ಮ ಸಂಸ್ಕೃತಿ ಪರಂಪರೆಯ ಸಂಕೇತ ದಸರಾ ಕ್ರೀಡಾಕೂಟದಲ್ಲಿ ನೆಟ್ ಬಾಲ್ ಪಂದ್ಯಾವಳಿಯಲ್ಲಿ ರಾಮನಗರ ಜಿಲ್ಲೆಯ ನೆಟ್ ಬಾಲ್ ಅಸೋಸಿಯೇಷನ್ ತಂಡ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ರೋಟರಿ ಟಾಯ್ಸ್ ಸಿಟಿ ಕ್ಲಬ್ ಅಡ್ವೈಸರ್ ಬಿ.ಎಂ .ನಾಗೇಶ್, ರಾಮನಗರ ನೆಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಮೋಹನ್, ತರಬೇತುದಾರರಾದ ಧನಶೇಖರ್, ಶಿವಕುಮಾರ್, ಚೇತನ್, ರೋಟರಿ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಪದಾಧಿಕಾರಿಗಳಾದ ಅರ್ಜುನ್, ನಿತಿನ್, ಚಂದನ್, ಕೆ.ರಾಜೇಶ್, ರಘು ಇತರರಿದ್ದರು. ಪೊಟೋ೧೫ಸಿಪಿಟಿ೩: ಮೈಸೂರು ದಸರಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳಿದ ರಾಮನಗರ ನೆಟ್‌ಬಾಲ್ ಅಸೋಸಿಯೇಷನ್ ಮಹಿಳಾ ಮತ್ತು ಪುರುಷರ ತಂಡಕ್ಕೆ ರೋಟರಿ ಟಾಯ್ಸ್ ಸಿಟಿ ಶಾಖೆಯಿಂದ ಟೀ ಶರ್ಟ್ ವಿತರಿಸಲಾಯಿತು.