ಕನ್ನಡಪ್ರಭ ವಾರ್ತೆ ವಿಜಯಪುರ
ಕಾರ್ಗಿಲ್ ಯುದ್ಧದ ನೈಜ ಪ್ರಪಂಚದ ವೀರಯೋಧರಾದ ಭಾರತೀಯ ಸೈನಿಕರನ್ನು ಪ್ರತಿವರ್ಷ ನೆನಪಿಸಿಕೊಳ್ಳುವುದು, ಅವರಿಗೆ ಗೌರವ ನಮನ ಸಲ್ಲಿಸುವುದು ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದು ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ ಹೇಳಿದರು.ನಗರದ ಹೊರವಲಯದ ಬರಟಗಿ ರಸ್ತೆಯಲ್ಲಿರುವ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಎಸ್.ಕುಮಾರ ಪಿಯು ಸೈನ್ಸ್ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಿ ಮಾತನಾಡಿದ ಅವರು, 25ನೇ ಕಾರ್ಗಿಲ್ ವಿಜಯ ದಿವಸ ಒಂದು ಗಮನಾರ್ಹ ಮತ್ತು ಮರೆಯಲಾಗದ ಸಂದರ್ಭವಾಗಿದ್ದು, ಆದ್ದರಿಂದ ಭಾರತೀಯ ಯೋಧರ ತ್ಯಾಗ, ದೇಶಪ್ರೇಮ, ಸಾಹಸ, ಪರಾಕ್ರಮಕ್ಕೆ ಗೌರವ ಸಲ್ಲಿಸೋಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಲತಾದೇವಿ ಮಾತನಾಡಿ, ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದು, ತ್ಯಾಗ, ಬಲಿದಾನ ದೇಶ ಪ್ರೇಮದ ಬಗ್ಗೆ ಮಾಡಿದ ಸಾಹಸ ಕೀರ್ತಿ ಪತಾಕೆಯನ್ನು ಸ್ಮರಿಸಬೇಕು. ಯೋಧರೆಂದರೆ ಕೇವಲ ವ್ಯಕ್ತಿಗಳಲ್ಲ ಅವರು ಶಕ್ತಿ ನಮ್ಮ ಹೆಮ್ಮೆ, ಸೇನೆಯ ಕೀರ್ತಿ, ಧೈರ್ಯ, ದೇಶ ಭಕ್ತಿಯ ಪ್ರತೀಕ. ಬಲಿಷ್ಠ ಭಾರತವನ್ನು ಕಟ್ಟಲು ಕೆಲಸ ಮಾಡುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಸಮಾಜ ವಿಜ್ಞಾನ ಶಿಕ್ಷಕಿ ರೋಹಿಣಿ ಝಳಕಿ ಮಾತನಾಡಿ, ಆಪರೇಷನ್ ವಿಜಯ ಎಂದು ಕರೆಯಲ್ಪಡುವ ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಕೆತ್ತಲಾದ ವಿಶೇಷ ದಿನವಾಗಿದೆ. ಪ್ರತಿ ವರ್ಷ ದೇಶದ ರಕ್ಷಣೆ ಮತ್ತು ಹೆಮ್ಮೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸುವ ವಿಜಯ ವೀರ ಸೈನಿಕರನ್ನು ರಾಷ್ಟ್ರವು ಸ್ಮರಿಸುತ್ತದೆ. ಕಾರ್ಗಿಲ್ ವಿಜಯದಿವಸ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಅಚಲವಾದ ಸಂಕಲ್ಪವನ್ನು ಆಚರಿಸುತ್ತದೆ. ಯುದ್ಧದಲ್ಲಿ ಭಾರತದ ವಿಜಯದ ಹೊರತಾಗಿ ಹಲವಾರು ಸೈನಿಕರು ಜೀವ ಕಳೆದುಕೊಂಡರು ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಧೈರ್ಯ ಶಾಲಿಯಾದ ಸೈನಿಕರಿಗೆ ಗೌರವ ಸಲ್ಲಿಸೋಣ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.