ಬಿಜೆಪಿ ಮೊದಲು ಕಾನೂನು ಸುವ್ಯವಸ್ಥೆಯ ಡೆಫಿನೇಷನ್ ಹೇಳಲಿ: ಡಾ.ಪರಮೇಶ್ವರ್

KannadaprabhaNewsNetwork | Published : Jun 7, 2024 12:31 AM

ಸಾರಾಂಶ

ಸಮಯ ಬಂದಾಗ ಎಲ್ಲ ಅಂಕಿ ಸಂಖ್ಯೆ ಬಿಡುಗಡೆ ಮಾಡುತ್ತೇನೆ. ಎರಡು ಅವಧಿಯನ್ನು ಹೋಲಿಸಿ ನೋಡೋಣ ಎಂದು ಸಚಿವ ಡಾ. ಎಂ. ಪರಮೇಶ್ವರ್‌ ಖಾರವಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಮೊದಲು ಕಾನೂನು ಸುವ್ಯವಸ್ಥೆ ಎಂದರೇನು ಎಂದು ವ್ಯಾಖ್ಯಾನ ಮಾಡಲಿ, ಸುಮ್ಮನೇ ಹಾರಿಕೆಯ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ರಾಜ್ಯ ಗೃಹಸಚಿವ ಡಾ.ಎಂ.ಪರಮೇಶ್ವರ್ ಹೇಳಿದ್ದಾರೆ.

ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ರೈಮ್ ನಡೆದೇ ಇಲ್ವಾ ? ಸಮಯ ಬಂದಾಗ ಎಲ್ಲಾ ಅಂಕಿ ಸಂಖ್ಯೆ ಬಿಡುಗಡೆ ಮಾಡುತ್ತೇನೆ, ಎರಡು ಅವಧಿಯನ್ನು ಹೋಲಿಸಿ ನೋಡೋಣ ಎಂದವರು ಖಾರವಾಗಿ ಪ್ರತಿಕ್ರಿಯಿಸಿದರು.

ಈಗ ಕೊಲೆ ಆಗಬಾರದಿತ್ತು, ಆಗಿದೆ, ಯಾಕಾಗಿದೆ ಅನ್ನೋದನ್ನು ಎಲ್ಲರೂ ಗಮನಿಸಿದ್ದಾರೆ. ಬಿಜೆಪಿ ಅವಧಿಯಲ್ಲಿಯೂ ಕೊಲೆಗಳಾಗಿದ್ದವಲ್ಲಾ ? ಹಾಗೇ ಈಗ ರಾಜಕೀಯ ಉದ್ದೇಶಕ್ಕಾಗಿ ಯಾವುದೇ ಕೊಲೆ ಆಗಿಲ್ಲ, ಎಲ್ಲಾದರೂ ಕೋಮು ಗಲಭೆ ಆಗಿದೆಯಾ ? ಗಣೇಶ ಹಬ್ಬ, ರಂಜಾನ್ ಹಬ್ಬಗಳಲ್ಲಿ ಸಾಮಾನ್ಯವಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದವು. ಆದರೆ ಈಗ ಎಲ್ಲವೂ ಸುಖಕರವಾಗಿ ಮುಗಿದಿದೆ ಎಂದರು.

ನಾಗೇಂದ್ರ ರಾಜೀನಾಮೆ ಕೇಳಿಲ್ಲ: ವಾಲ್ಮೀಕಿ ನಿಗಮ ಪ್ರಕರಣದಲ್ಲಿ ರಾಜಿನಾಮೆ ನೀಡುವ ಬಗ್ಗೆ ಸಚಿವ ನಾಗೇಂದ್ರ ಅವರೇ ತೀರ್ಮಾನ ತೆಗೆದುಕೊಳ್ಳಬೇಕು, ಯಾರೂ ಕೂಡ ಒತ್ತಾಯ ಮಾಡಿ ರಾಜಿನಾಮೆ ಕೊಡಿ ಎಂದು ಹೇಳಲು ಆಗಲ್ಲ.

ಮುಖ್ಯಮಂತ್ರಿಗಳು ಕೂಡ ರಾಜಿನಾಮೆಗೆ ಹೇಳಿಲ್ಲ, ನಾವು ವಿಶೇಷ ತನಿಖಾ ದಳದಿಂದ ತನಿಖೆ ಮಾಡಿಸುತ್ತಿದ್ದೇವೆ, 3 ಕೋಟಿ ರು.ಗೂ ಹೆಚ್ಚು ಬ್ಯಾಂಕ್ ವಂಚನೆಯ ಪ್ರಕರಣವಾದ್ದರಿಂದ ಸ್ವಾಭಾವಿಕವಾಗಿಯೇ ಸಿಬಿಐ ತನಿಖೆ ಆಗುತ್ತಿದೆ, ತನಿಖೆಯಲ್ಲಿ ಏನು ಬರುತ್ತದೆ ಕಾದು ನೋಡೋಣ ಎಂದರು.

ಯಾರೂ ದೂರು ಕೊಟ್ಟಿಲ್ಲ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ 100 ಕೋಟಿ ರು. ಹಗರಣ ನಡೆದಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಈ ಬಗ್ಗೆ ಯಾರೂ ನಮಗೆ ದೂರು ಕೊಟ್ಟಿಲ್ಲ, ಆರೋಪ ಮಾಡುತ್ತಿರುವ ಗೂಳಿಹಟ್ಟಿ ಶೇಖರ್ ಅವರೂ ನಮಗೆ ದೂರು ಕೊಟ್ಟರೂ ಸಾಕು, ಅದನ್ನೂ ತನಿಖೆ ಮಾಡುತ್ತೇವೆ ಎಂದರು.

ಕಾಂಗ್ರೆಸಿಗೆ ಹಿನ್ನಡೆಯಾಗಿಲ್ಲ: ಲೋಕಸಭಾ ಚುನಾವಣೆಯಲ್ಲಿ ನಮಗೆ ಯಾವ ಹಿನ್ನಡೆಯೂ ಆಗಿಲ್ಲ. ರಾಜ್ಯದಲ್ಲಿ 20 - 28 ಗೆಲ್ಲಬೇಕು ಎಂಬ ನಿರೀಕ್ಷೆ ಇತ್ತು, ಆದರೆ ನಾವು 1 ಇದ್ದ ಸ್ಥಾನವನ್ನು 9 ಕ್ಕೇರಿಸಿದ್ದೇವೆ. ಓ‍ಟ್ ಶೇರ್ ಕೂಡ ಹೆಚ್ಚಾಗಿದೆ. ನರೇಂದ್ರ ಮೋದಿ ಅವರಿಗೆ ಹಿನ್ನಡೆ ಆಗಲಿಲ್ಲವೇ ? ಬಿಜೆಪಿಗೆ 240 ಸೀಟು ಅಂದ್ರೆ ಹಿನ್ನಡೆ ಅಲ್ವಾ ? ಎನ್‌ಡಿಎಗೆ 400 ಸ್ಥಾನ ಬರುತ್ತದೆ ಎಂದು ಅವರು ನಿರೀಕ್ಷಿಸಿದ್ದರು, ಜನರು ಎನ್‌ಡಿಎಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ ಎಂದವರು ಹೇಳಿದರು.

ರಾಜ್ಯದ ಸಚಿವ ಸಂಪುಟ ವಿಸ್ತರಣೆ ಬಗ್ಗೆ, ಡಿಸಿಎಂ ಸ್ಥಾನಕ್ಕೆ ತನ್ನ ಹೆಸರು ಪ್ರಸ್ತಾಪ ಆಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಸ್ಪರ್ಧೆ, ರಾಜಕೀಯದ ತೀರ್ಮಾನಗಳನ್ನು ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದವರು ಪ್ರಶ್ನೆಗಳಿಗೆ ಉತ್ತರಿಸಿದರು.

ಉಸ್ತುವಾರಿ ಸಚಿವರ ಕೆಲಸದಲ್ಲಿ ತಪ್ಪಿದ್ದರೇ ಹೇಳಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕೆ ಉಡುಪಿಗೆ ಬಂದೇ ಇಲ್ಲಾ ಎಂದು ಅವರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ಗೋಬ್ಯಾಕ್ ಅಭಿಯಾನ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ ಮಾಡುವುದು ಆಡಳಿತದ ದೃಷ್ಟಿಯಿಂದ, ಹೊರತು ರಾಜಕೀಯದ ದೃಷ್ಟಿಯಿಂದ ಅಲ್ಲ. ಪಕ್ಷದ ಕೆಲಸಗಳಿಗೆ ಜಿಲ್ಲೆಗೆ ಪ್ರತ್ಯೇಕ ಉಸ್ತುವಾರಿಗಳು ಇರುತ್ತಾರೆ. ಜಿಲ್ಲೆಯಲ್ಲಿ ಆಡಳಿತ ಚುರುಕುಗೊಳಿಸುವುದು, ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಮಾಡುವುದು ಉಸ್ತುವಾರಿ ಸಚಿವರ ಕೆಲಸ, ಈ ವಿಷಯದಲ್ಲಿ ಏನಾದರೂ ತಪ್ಪಿದ್ದರೆ, ಕಾರ್ಯಕರ್ತರು ಹೇಳಿದರೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ ಎಂದು ಹೇಳಿದರು.

ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಸರ್ಕಾರ ಗ್ಯಾರಂಟಿ ಯೋಜನಗೆಳನ್ನು ರಾಜಕೀಯ ಉದ್ದೇಶಕ್ಕಾಗಿ ಜಾರಿಗೊಳಿಸಿದ್ದಲ್ಲ, ಆದರೆ ಚುನಾವಣೆಯಲ್ಲಿ ಸಹಾಯವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಪಟ್ಟಣ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಗ್ರಾಮೀಣ ಭಾಗದ ಜನಕ್ಕೆ ಈ ಯೋಜನೆ ಉಪಯೋಗವಾಗುತ್ತಿದೆ. ಗ್ಯಾರೆಂಟಿ ಯೋಜನೆಗಳ ಮುಂದುವರಿಕೆ ಜೊತೆ ಅಭಿವೃದ್ಧಿ ಕಾರ್ಯ ಕೂಡಾ ಮಾಡುತ್ತೇವೆ. ರಾಜ್ಯದ ಬಜೆಟ್ ಗಾತ್ರ ಹಿಗ್ಗಿದೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೆ ಕೂಡ ಹಣಕಾಸಿನ ವ್ಯವಸ್ಥೆ ಕೂಡ ಆಗಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಡಾ.ಪರಮೇಶ್ವರ್ ಸ್ಪಷ್ಟಪಡಿಸಿದರು.

Share this article