ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಬಂಗಾರ ಧಾಮದಿಂದ ಬೃಹತ್ ಪ್ರತಿಭಟನೆಯಲ್ಲಿ ತಾಲೂಕು ಕಚೇರಿ ಆವರಣಕ್ಕೆ ತಲುಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ರಾಜ್ಯಪಾಲರ ಕ್ರಮವನ್ನು ಖಂಡಿಸಿದರು. ಮೆರವಣಿಗೆ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೋಸ್ಟರ್ ಪ್ರದರ್ಶಿಸುತ್ತಾ ಬಂದ ಕಾರ್ಯಕರ್ತರು, ರಾಜ್ಯಪಾಲರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದೇ ವೇಳೆ ನಮ್ಮ ಸಿದ್ದು, ಕರ್ನಾಟಕದ ಶಕ್ತಿ ಎಂಬ ಘೋಷಣೆಯ ಪ್ಲೇ ಕಾರ್ಡ್ ಹಿಡಿದು, ಸಿದ್ದರಾಮಯ್ಯ ಪರ ಜಯ ಘೋಷ ಮೊಳಗಿಸಿದರು.
ಬಿಜೆಪಿ ಕೈಗೊಂಬೆಯಾದ ರಾಜ್ಯಪಾಲರು ಕರ್ನಾಟಕ ಬಿಟ್ಟು ತೊಲಗಬೇಕು, ಸೇಡಿನ ರಾಜಕಾರಣಕ್ಕೆ ಸರ್ಕಾರ ಕೆಡವಲು ಹೊರಟ ರಾಜ್ಯಪಾಲರು ಕರ್ನಾಟಕ ತೊರೆಯಬೇಕೆಂದು ಆಗ್ರಹಿಸುತ್ತಲೇ ಧಿಕ್ಕಾರದ ಘೋಷಣೆ ಕೂಗಿದರು. ತಾಲೂಕು ಕಚೇರಿ ಆವರಣದದಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆಂದು ವಾಗ್ದಾಳಿ ನಡೆಸಿದರು.ರಾಜಕೀಯ ಸೇಡಿಗಾಗಿ ರಾಜ್ಯಪಾಲರ ಕಚೇರಿ ದುರುಪಯೋಗವಾಗಿದೆ. ಕೇಂದ್ರದ ಹಿತಾಸಕ್ತಿಗಳಿಗೆ ಅದು ಬಲಿಯಾಗಿದೆ. ಸೇಡಿನ ರಾಜಕಾರಣಕ್ಕೆ ಬಲಿಯಾಗಿ ಬಹುಮತ ಇರುವ ಚುನಾಯಿತ ಸರ್ಕಾರವನ್ನು ಕೆಡುವಲು ಪಿತೂರಿ ನಡೆದಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅಣ್ಣಪ್ಪ ಹಾಲಘಟ್ಟ ಮತ್ತು ಸದಾನಂದಗೌಡ ಬಿಳಗಲಿ, ಜಯಶೀಲ್ ಗೌಡ ಅಂಕರವಳ್ಳಿ, ತಬಲಿ ಬಂಗಾರಪ್ಪ, ಎಂ.ಡಿ. ಶೇಖರ್, ಕಲ್ಲಂಬಿ ಹಿರಿಯಣ್ಣ, ನಾಗರಾಜಪ್ಪ, ಬಶೀರ್‌ಸಾಬ್, ಸಂಜೀವ, ಮಂಜಣ್ಣ, ಮತ್ತು ಪುರಸಭಾ ಸದಸ್ಯರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.ರಾಜ್ಯಪಾಲರು ಪಕ್ಷಪಾತಿಯಾಗಿರಬಾರದು. ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸಂವಿಧಾನ ಭಾಹಿರವಾಗಿದೆ. ಕೇಂದ್ರ ಸರ್ಕಾರ ತಕ್ಷಣವೇ ಅವರನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಸೊರಬ ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಗಣಪತಿ ಆಗ್ರಹಿಸಿದರು.