ದೇವಾಂಗ ಸಮಾಜದ ಒಳಪಂಗಡಗಳು ಒಗ್ಗಟ್ಟಾಗಲಿ: ಶಾಸಕ ವಿಜಯಾನಂದ ಕಾಶಪ್ಪನವರ

KannadaprabhaNewsNetwork |  
Published : Aug 08, 2025, 02:00 AM IST
೭ ಇಳಕಲ್ಲ ೧ | Kannada Prabha

ಸಾರಾಂಶ

ದೇವಾಂಗ ಸಮಾಜ ಒಳಪಂಗಡಗಳನ್ನೆಲ್ಲ ಒಂದುಗೂಡಿಸಿಕೊಂಡು ಒಗ್ಗಟ್ಟಾಗಬೇಕಿದ್ದು, ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ದೇವಾಂಗ ಸಮಾಜ ಒಳಪಂಗಡಗಳನ್ನೆಲ್ಲ ಒಂದುಗೂಡಿಸಿಕೊಂಡು ಒಗ್ಗಟ್ಟಾಗಬೇಕಿದ್ದು, ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ದೇವಾಂಗ ಸಂಘದ ಆರ್.ವೀರಮಣಿ ಸಾಂಸ್ಕೃತಿಕ ಭವನದಲ್ಲಿ ಬಾಗಲಕೋಟೆ ಜಿಲ್ಲಾ ದೇವಾಂಗ ಸಂಘ, ಬಾಗಲಕೋಟೆ ಜಿಲ್ಲಾ ದೇವಾಂಗ ನೌಕರ ಸಂಘ, ದೇವಾಂಗ ಸಂಘ ಇಳಕಲ್ಲ ಹಾಗೂ ಇಳಕಲ್ಲ ತಾಲೂಕು ನೌಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿಗಣತಿ ಜಾರಿಗೊಳಿಸುವ ಮೂಲ ಉದ್ದೇಶ ಕೇಳವರ್ಗಗಳ ಜನರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತುಳಿತಕ್ಕೊಳಗಾಗುವುದನ್ನು ತಡೆಯುವ ಉದ್ದೇಶವಿದ್ದು, ನೀವು ಈಗತಾನೆ ನಿಮ್ಮ ರಾಜ್ಯಾಧ್ಯಕರು ಹೇಳಿದಂತೆ ಚಾಚೂತಪ್ಪದೆ ಪಾಲಿಸಿದರೆ ನಿಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂದರು.

ನಮ್ಮ ಸರ್ಕಾರಿ ಯಾವತ್ತೂ ನೇಕಾರ ಸಮುದಾಯ ಪರವಾಗಿದ್ದು, ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯವಾಗಲು ನಾನು ಬಿಡಲ್ಲ. ದೇವಾಂಗ ಸಮಾಜದೊಂದಿಗೆ ನಮ್ಮ ತಂದೆಯವರ ಕಾಲದಿಂದಲೂ ಅವಿನಾಭಾವ ಸಂಬಂಧ ಹೊಂದಿದ್ದೇನೆ. ನಗರದಲ್ಲಿ ೪೨ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ನಿವೇಶನದಲ್ಲಿ ನೇಕಾರ ಸಮುದಾಯ ೭೦೦ ಮನೆ ಮೀಸಲಿಡುವುದಾಗಿ ಭರವಸೆ ನೀಡಿದರು. ಜಗದ್ಗುರು ದಯಾನಂದಪುರಿ ಸ್ವಾಮೀಜಿ ನ.೨೯ ಹಾಗೂ ೩೦ರಂದು ಬನಶಂಕರಿಯಲ್ಲಿ ಜರುಗುವ ಅಖಿಲ ಭಾರತ ದೇವಾಂಗ ಮಹಾಸಮ್ಮೇಳನಕ್ಕೆ ಆಗಮಿಸಲು ಅವ್ಹಾನಿಸಿದ್ದು, ಎರಡು ದಿನ ನಾನು ಅಲ್ಲೇ ವಾಸ್ತವ್ಯ ಹೂಡಿ ಕಾರ‍್ಯಕ್ರಮ ಯಶಸ್ವಿಗೊಳಿಸುವುದಾಗಿ ಹೇಳಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಇಂದು ನೇಕಾರಿಕೆ ಸಂಕಷ್ಟಕರ ಸ್ಥಿತಿಯಲ್ಲಿದ್ದು, ನಿಮ್ಮ ಮುಂದಿನ ಪೀಳಿಗೆ ಇದರಿಂದ ಪಾರಾಗಬೇಕಾದರೆ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವಂತೆ ಮಾಡಿ. ನಗರದ ನೇಕಾರ ಸಮುದಾಯ ಯಾವತ್ತೂ ನನ್ನನ್ನು ಬೆಂಬಲಿಸುತ್ತಿದ್ದು, ಆ ಸಮುದಾಯಕ್ಕೆ ನಾನು ಯಾವತ್ತೂ ಋಣಿಯಾಗಿದ್ದೇನೆ. ಪ್ರತಿಭಾ ಪುರಸ್ಕಾರ ಹಾಗೂ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಕಾರ್ಯ ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.

ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಜಾತಿಗಣತಿ ಆಯೋಗ ಸರಿಯಾಗಿ ಸಮೀಕ್ಷೆ ನಡೆಸದೆ ಇರುವುದರಿಂದ ನಮ್ಮ ಸಮುದಾಯಕ್ಕೆ ಬಹಳಷ್ಟು ಅನ್ಯಾವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರಿಗೂ ಇಂದು ಒಗ್ಗಟ್ಟಾಗಿ ಎದುರಿಸಬೇಕಿದೆ. ನಮ್ಮ ಮತಕ್ಷೇತ್ರದ ಶಾಸಕರಾದ ವಿಜಯಾನಂದ ಕಾಶಪ್ಪನವರ ನೇಕಾರ ಸಮುದಾಯದ ಬಗ್ಗೆ ಸಾಕಷ್ಟು ಕಾಳಜಿ ಉಳ್ಳವರಾಗಿದ್ದಾರೆ. ಸರ್ಕಾರದಲ್ಲಿ ನಮ್ಮ ದ್ವನಿಯಾಗಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಬಸವರಾಜ ಕುದರಿ ಸಂಘ ಈವರೆಗೂ ನಡೆದು ಬಂದ ದಾರಿಯನ್ನು ವಿವರಿಸಿದರು.

ಹಂಪಿಹೇಮಕೂಟ ಜಗದ್ಗುರು ದಯಾನಂದಪುರಿ ಸ್ವಾಮೀಜಿ, ನಗರದ ಮುನಿಸ್ವಾಮೀಜಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು.

ವೇದಿಕೆ ಮೇಲೆ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸತೀಶ ಸಪ್ಪರದ, ತಾಲೂಕು ಅಧ್ಯಕ್ಷ ನಾರಾಯಣ ಬಿಜ್ಜಲ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ, ಗೌರವ ಸನ್ಮಾನ: ಇಳಕಲ್ಲದ ಪಂಪಾಪತಿ ಕಾಳಗಿ, ರಾಮದುರ್ಗದ ಮನೋಹರ ರಾಮದುರ್ಗ, ಗುಳೇದಗುಡ್ಡದ ರಂಗಪ್ಪ ಶೇಬನಕಟ್ಟಿ, ಕಮತಗಿಯ ಗೋಪಾಲಪ್ಪ ವನಕಿ, ಕೆರೂರಿನ ಸಂಕಣ್ಣ ಹೊಸಮನಿ ಹಾಗೂ ಬಾಗಲಕೋಟೆಯ ಪಾಂಡುರಂಗ ಶಾಲದಾರ ಅವರಿಗೆ ದೇವಾಂಗ ಕುಲಭೂಷಣ ಪ್ರಶಸ್ತಿ, ನಗರದ ದೇವಾಂಗ ಸಮಾಜದ ನಾಲ್ಕು ಪೇಟೆಯ ಚೇರಮನ್‌ರಿಗೆ, ದೇವಾಂಗ ಸಮಾಜದ ೧೬ ಜನ ವೈದ್ಯ ದಂಪತಿ, ೮ ಜನರಿಗೆ ಶ್ರೀ ದೇವಲ ಮಹರ್ಷಿ ಸಮಾಜ ಸೇವಾ ಪ್ರಶಸ್ತಿ, ೪ ಜನರಿಗೆ ಶ್ರೀ ದೇವಲ ಮಹರ್ಷಿ ಕಲಾಶ್ರೀ ಪ್ರಶಸ್ತಿ, ೩೨ ಜನರಿಗೆ ಶ್ರೀ ದೇವಲ ಮಹರ್ಷಿ ಸೇವಾ ಪ್ರಶಸ್ತಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೯೦ಕ್ಕೂ ಅಧಿಕ ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ