ಕನ್ನಡಪ್ರಭ ವಾರ್ತೆ ರಾಮನಗರ
ಕೃಷಿ ಭೂಮಿಗಾಗಿ ಹೋರಾಟ ನಡೆಸುತ್ತಿರುವ ರೈತರ ಪೈಕಿ ವಿಶ್ವನಾಥ್ ವಿಷ ಸೇವಿಸಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ 16 ಕುಟುಂಬಗಳ ರೈತರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾರೆ.
ಮಂಗಳವಾರ ಪೇಟೆ ಗ್ರಾಮದ ಸರ್ವೇ ನಂಬರ್ 52, 53 ಮತ್ತು 67ರಲ್ಲಿ ಉಳುವವನೆ ಭೂಮಿ ಒಡೆಯ ಯೋಜನೆಯಲ್ಲಿ 16 ಮಂದಿ ರೈತರಿಗೆ ಜಮೀನು ಮಂಜೂರಾಗಿದೆ. ಕಳೆದ 70 ವರ್ಷಗಳಿಂದ ಅನುಭೋಗದಲ್ಲಿದ್ದು, ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಸಿದ್ದೇಗೌಡ ಎಂಬ ವ್ಯಕ್ತಿ ಹಣ ಬಲ, ತೋಳ್ಬಲ ಪ್ರಯೋಗಿಸಿ ಜಮೀನನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ರೈತಸಂಘ ಮುಖಂಡ ಶ್ರೀನಿವಾಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.ಈ ಜಮೀನು ಮೂಲತಃ ಸಕ್ಕುಬಾಯಿ ಅವರಿಗೆ ಸೇರಿದ್ದಾಗಿದೆ. ಇಂದಿರಾಗಾಂಧಿ ಅವರ ಸರ್ಕಾರದಲ್ಲಿ 1975ರಲ್ಲಿ ಭೂ ಸುಧಾರಣೆ ಮತ್ತು ಗೇಣಿದಾರರ ಕಾಯ್ದೆ ಜಾರಿಯಾದಾಗ ರೈತರಿಗೆ ಸಿಕ್ಕ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಗ್ರಾಮದ ಸಿದ್ದೇಗೌಡ ಎಂಬುವರು ವರದೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ 17 ಎಕರೆ 10 ಗುಂಟೆಯನ್ನುು ಅಕ್ರಮವಾಗಿ ಪಹಣಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಭೂಮಿ ಮತ್ತು ರೈತರದು ತಾಯಿ- ಮಕ್ಕಳ ಸಂಬಂಧ. ಭೂಮಿ ಕಳೆದುಕೊಂಡಿರುವ ರೈತ ಕುಟುಂಬಗಳು ನೋವಿನಿಂದ ಜೀವನ ನಡೆಸುವಂತಾಗಿದೆ. ಒಂದು ಕಡೆ ನ್ಯಾಯವೂ ಮರೀಚಿಕೆಯಾಗಿದೆ. ಭೂ ತಾಯಿಯನ್ನು ಕಳೆದುಕೊಂಡಿರುವ ರೈತರು ಬದುಕು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ರೈತ ಕುಟುಂಬಗಳು ರಾಷ್ಟ್ರಪತಿಗಳಲ್ಲಿ ದಯಾಮರಣ ಕೋರಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಯಾಮರಣ ಕೋರಿರುವ ರೈತ ಕುಟುಂಬದ ರಾಜಣ್ಣ, ರಮೇಶ್ , ದೇವರಾಜು, ಜಯಲಕ್ಷ್ಮಮ್ಮ, ಶಿವರತ್ನಮ್ಮ ಇದ್ದರು.
14ಕೆಆರ್ ಎಂಎನ್ 6.ಜೆಪಿಜಿ
-