ಹಾವೇರಿ ಹತ್ತಿರದ ಗಣಜೂರು ಗ್ರಾಮದ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಕಲಾವಿದ ಕೆ.ಆರ್. ಹಿರೇಮಠ ಅವರ ವಯೋನಿವೃತ್ತಿ ಸಮಾರಂಭ ಇಲ್ಲಿಯ ಗುರುಭವನದಲ್ಲಿ ಜರುಗಿತು.
ಹಾವೇರಿ: ಇಲ್ಲಿಗೆ ಹತ್ತಿರದ ಗಣಜೂರು ಗ್ರಾಮದ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಕಲಾವಿದ ಕೆ.ಆರ್. ಹಿರೇಮಠ ಅವರ ವಯೋನಿವೃತ್ತಿ ಸಮಾರಂಭ ಇಲ್ಲಿಯ ಗುರುಭವನದಲ್ಲಿ ಜರುಗಿತು.
ಕೆ.ಆರ್. ಅಭಿನಂದನಾ ಸಮಿತಿ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ, ಶಸ್ತ್ರ ವಿದ್ಯೆಗಿಂತ, ಜ್ಞಾನ ವಿಸ್ತಾರಗೊಳಿಸಿ, ಜೀವನಾಧಾರವಾಗುವ ಶಾಸ್ತ್ರ ವಿದ್ಯೆ ಇಂದು ಬೇಕಾಗಿದೆ. ಶಿಕ್ಷಕನೊಳಗೊಬ್ಬ ಕಲಾವಿದನಿದ್ದರೆ ಇಂತಹ ಶಾಸ್ತ್ರವಿದ್ಯೆ ಕಲಿಸಬಹುದೆಂಬುದಕ್ಕೆ ಒಂದು ಮಾದರಿ ಕೆ.ಆರ್. ಹಿರೇಮಠ ಎಂದು ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಶಿಗ್ಗಾಂವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಶಿಕ್ಷಕನಿಗೆ ತಾಯ್ತನದ ಗುಣವಿರಬೇಕು. ಅಂತಹ ಶಿಕ್ಷಕ ಹಿರೇಮಠ ಅವರು. ನಮ್ಮ ಇಲಾಖೆಯ ಎಲ್ಲ ಯೋಜನೆಗಳಿಗೆ ಕಲಾಗುಣದಿಂದ ಜೀವ ತುಂಬಿದ ಅಪರೂಪದ ಶಿಕ್ಷಕ ಎಂದರು.
ದಪ್ಪು ಬಾರಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಸತೀಶ ಕುಲಕರ್ಣಿ, ಕೆ.ಆರ್. ಬಳಗವೆಂದರೆ ಕಾಗೆಯ ಬಳಗವಿದ್ದಂತೆ. ಎಂತಹ ಕಠಿಣ ಕಾರ್ಯಕ್ರಮಗಳಿದ್ದರೂ ಅವನ್ನು ನಿಭಾಯಿಸುವ ಶಕ್ತಿ ಇರುವ ಶಿಕ್ಷಕ. ರಾತ್ರಿಗಳನ್ನು ಹಗಲು ಮಾಡಿ ಜಿಲ್ಲೆಯ ಸಾಂಸ್ಕೃತಿಕ ಲೋಕವನ್ನು ಜೀವಂತ ಇಟ್ಟ ಕಲಾವಿದ ಎಂದರು.
ಕೆ.ಆರ್. ಹಿರೇಮಠ ಅವರನ್ನು ಅನೇಕ ಸಂಘಟನೆಗಳು ಸನ್ಮಾನಿಸಿದವು. ಕುಟುಂಬದ ಸದಸ್ಯರಾದ ಪುನೀತಾ, ಅನಿತಾ ಹಾಗೂ ವಿಶ್ವ ಇದ್ದರು.
ಸನ್ಮಾನವನ್ನು ಸ್ವೀಕರಿಸಿದ ಕೆ.ಆರ್. ಹಿರೇಮಠ, ನನ್ನ ತಂದೆಯೇ ನನ್ನ ನಾಯಕ. ಆತನಿಂದ ಜೀವ ಜೀವನ ನೋಡುವುದನ್ನು ಕಲಿತೆ. ಕಲೆ, ಸಂಗೀತ, ಅಭಿನಯ, ಪಾಠ ಪ್ರವಚನ ಕಲಿಸುವ ಯಶಸ್ವಿ ಶಿಕ್ಷಕನಾದೆ. ಜಿಲ್ಲಾ ಶಾಲಾ ಶಿಕ್ಷಣ ನನಗೆ ಅನ್ನ-ಆಶ್ರಯ ಸಾಕಷ್ಟು ಹೆಸರು ಕೊಟ್ಟಿದೆ. ನನ್ನ ಕುಟುಂಬ ಋಣಿಯಾಗಿರುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಎಸ್.ಜಿ. ಕೋಟಿ, ಶ್ಯಾಮಸುಂದರ ಅಡಿಗ, ಆರ್.ವಿ. ಚಿನ್ನಿಕಟ್ಟಿ, ಎಂ.ಎಫ್. ಬಾರ್ಕಿ, ಎಚ್.ಎಂ. ಫಡ್ನೇಶಿ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಬಸವರಾಜ ಶಿಡೇನೂರ, ಬಸವರಾಜ ಅರಳಿ, ಎ.ಎಚ್. ಹವಾಲ್ದಾರ, ಎಂ.ಎಸ್. ಗುಂಡಪಲ್ಲಿ, ಈರಣ್ಣ ಅಗಸಿಬಾಗಲ ಮಾತನಾಡಿದರು.
ಜಿಲ್ಲಾ ಕಲಾ ಬಳಗದ ಕರಿಯಪ್ಪ ಹಂಚಿನಮನಿ, ರೇಣುಕಾ ಗುಡಿಮನಿ, ಪರಿಮಳಾ ಜೈನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವೈ.ಬಿ. ಆಲದಕಟ್ಟಿ, ಆರ್.ಸಿ. ನಂದೀಹಳ್ಳಿ ಪಾಲ್ಗೊಂಡಿದ್ದರು. ಎ.ಬಿ. ಗುಡ್ಡಳ್ಳಿ ಪಾರ್ಥನೆ ಹಾಡಿದರು. ಮಹಾಂತೇಶ ಮರಿಗೂಳಪ್ಪನವರ ಸ್ವಾಗತಿಸಿದರು. ನಾಗರಾಜ ನಡುವಿನಮಠ ಮತ್ತು ನಾಗರಾಜ ದೇಶಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವಿರೂಪಾಕ್ಷ ಪಡಗೋದಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.