ಲಿಂಗನಮಕ್ಕಿ ಬಹುತೇಕ ಭರ್ತಿ: ನೀರು ಹೊರಕ್ಕೆ

KannadaprabhaNewsNetwork |  
Published : Aug 20, 2025, 01:30 AM IST
19ಕೆ.ಎಸ್.ಎ.ಜಿ.1ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಬಿಟ್ಟಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತ ರುದ್ರ ರಮಣೀಯವಾಗಿ ಭೋರ್ಗರೆಯುತ್ತಿದೆ. | Kannada Prabha

ಸಾರಾಂಶ

ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 48393 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 1816.2ಕ್ಕೆ ಏರಿಕೆಯಾಗಿದ್ದು, 142.39 ಟಿಎಂಸಿ ನೀರು ಸಂಗ್ರಹಣೆಗೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಜಲಾಶಯದ 11 ರೇಡಿಯಲ್ ಗೇಟ್‍ಗಳನ್ನು ತೆರೆದು ಸುಮಾರು 15 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ/ ರಾಜೇಶ್‌ ಭಡ್ತಿ

ಕನ್ನಡಪ್ರಭ ವಾರ್ತೆ ಸಾಗರ। ತಾಳಗುಪ್ಪ

ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 48393 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 1816.2ಕ್ಕೆ ಏರಿಕೆಯಾಗಿದ್ದು, 142.39 ಟಿಎಂಸಿ ನೀರು ಸಂಗ್ರಹಣೆಗೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಜಲಾಶಯದ 11 ರೇಡಿಯಲ್ ಗೇಟ್‍ಗಳನ್ನು ತೆರೆದು ಸುಮಾರು 15 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜಲಾಶಯಕ್ಕೆ ಸುಮಾರು 50 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಹೀಗಾಗಿ ಅಣೆಕಟ್ಟೆಯ ನೀರಿನ ಮಟ್ಟ 1815 ಅಡಿ (ಒಟ್ಟು 1819 ಅಡಿ) ತಲುಪಿದ ಹಿನ್ನೆಲೆಯಲ್ಲಿ ಮುಂಜಾಗೃತೆಯ ದೃಷ್ಟಿಯಿಂದ ಗೇಟ್‍ಗಳನ್ನು ತೆರೆದು ನೀರನ್ನು ಹೊರಬಿಡಲಾಗಿದೆ. ಪ್ರತಿ ಗೇಟ್‍ನ್ನು ಸುಮಾರು ಅರ್ಧ ಅಡಿಗಳಷ್ಟು ಮೇಲಕ್ಕೆತ್ತಿ ನೀರು ಬಿಡಲಾಗಿದೆ. ನೀರಿನ ಒಳಹರಿವು ಹೆಚ್ಚಾದರೆ ಗೇಟ್‍ಗಳನ್ನು ಇನ್ನಷ್ಟು ಮೇಲಕ್ಕೆತ್ತಿ ಹೆಚ್ಚಿನ ನೀರನ್ನು ಬಿಡಲಾಗುವುದು.

ಈ ವರ್ಷ ಮೇ ತಿಂಗಳಿನಿಂದಲೇ ಉತ್ತಮ ಮಳೆಯಾಗುತ್ತಿತ್ತು. ಜೂನ್, ಜುಲೈ ತಿಂಗಳಿನಲ್ಲಿ ವ್ಯಾಪಕ ಮಳೆಯಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿತ್ತು. ಆಗಸ್ಟ್ ಮೊದಲ ವಾರ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿತ್ತು. ಹಾಗಾಗಿ ಮಂಗಳವಾರ ಬೆಳಿಗ್ಗೆ ನದಿಗೆ ನೀರು ಬಿಡಲಾಗಿದೆ. ಕಳೆದ ವರ್ಷವೂ ಜಲಾಶಯ ಬಹುತೇಕ ಭರ್ತಿಯಾಗಿ ಗೇಟ್‍ಗಳನ್ನು ತೆರೆದು ನದಿಗೆ ನೀರು ಬಿಡಲಾಗಿತ್ತು.

ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಸೀತೆಯ ಬಾಯಾರಿಕೆ ಇಂಗಿಸಲು ಶ್ರೀ ರಾಮನ ಬಾಣದಿಂದ ಉಗಮವಾದಳು ಎಂಬ ಪ್ರತೀತಿ ಇರುವ ಶರಾವತಿ ನದಿ ಹುಟ್ಟಿನಿಂದ 132 ಕಿಮೀ ಹರಿದು, ಅರಬ್ಬಿ ಸಮುದ್ರದಲ್ಲಿ ಲೀನವಾಗುತ್ತದೆ. ವಾರ್ಷಿಕವಾಗಿ ಸರಾಸರಿ 4830 ಕುಬಿಕ್ ಮೀಟರ್ ನೀರು ಹರಿಯುವ ಈ ನದಿಗೆ ಲಿಂಗನಮಕ್ಕಿ ಎಂಬ ಹಳ್ಳಿಯಲ್ಲಿ ನದಿ ಪಾತಳಿಯಿಂದ 55 ಮೀಟರ್ (181 ಅಡಿ ) ಎತ್ತರ ಹಾಗೂ 2750 ಮೀಟರ್ ಉದ್ದದ ಆಣೆಕಟ್ಟೆ ಕಟ್ಟಲಾಗಿದೆ. ಲಿಂಗನಮಕ್ಕಿ ಜಲಾಶಯವು ನಿರ್ಮಾಣಕಾಲದಲ್ಲಿ ಏಷ್ಯ ಖಂಡದಲ್ಲಿಯೇ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಾಶಯದ ಹಿನ್ನೀರು 337 ಚದರ ಕಿಮೀ ಪ್ರದೇಶಕ್ಕೆ ವ್ಯಾಪಿಸಿದ್ದು, 156 ಟಿಎಂಸಿ ನೀರು ಸಂಗ್ರಹಗೊಳ್ಳುತ್ತದೆ. ನದಿಯ ಪ್ರವಾಹವನ್ನು ಹೊರ ಚೆಲ್ಲಲು ಹನ್ನೊಂದು 15.24 x 7.32 ಮೀಟರ್ (50 ಘನ 24 ಅಡಿ ) ಉಕ್ಕಿನ ಕ್ರಸ್ಟ್‌ ಗೇಟ್ ಕೂರಿಸಲಾಗಿದೆ.

ಈ ಜಲಾಶಯವನ್ನು ಅವಲಂಬಿಸಿ ಲಿಂಗನಮಕ್ಕಿ ವಿದ್ಯುದಾಗರದಲ್ಲಿ 55 ಮೆಗಾ ವ್ಯಾಟ್, ಮಹಾತ್ಮ ಗಾಂಧಿ ಜಲವಿದ್ಯುದಾಗರದಲ್ಲಿ 139.2 ಮೆಗಾ ವ್ಯಾಟ್, ಶರಾವತಿ ವಿದ್ಯುದಾಗರದಲ್ಲಿ 1035 ಮೆಗಾ ವ್ಯಾಟ್, ವಿದ್ಯುದುತ್ಪಾದನೆಯ ಸಾಮರ್ಥ್ಯ ಹೊಂದಿದೆ.

ಜೋಗಕ್ಕೆ ಜೀವಕಳೆ, ಪ್ರವಾಸಿಗರ ದಂಡು

ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದ್ದು, ಫಾಲ್ಸ್ ಸೌಂದರ್ಯ ಕಂಡು ಪ್ರವಾಸಿಗರು ಮನಸೋತಿದ್ದಾರೆ.

ನಿರಂತರ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಮೂಲಕ ಶರಾವತಿ ನದಿಗೆ ನೀರು ಹರಿದುಬಂದಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ. ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.‌

ಜಲಪಾತದ ರಾಜ, ರಾಣಿ, ರೋರರ್ ಹಾಗೂ ರಾಕೆಟ್ ಜಲಧಾರೆಗಳು ಭೋರ್ಗರೆಯುತ್ತಿದ್ದು, ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ