ನರಗುಂದ: ಕರ್ನಾಟಕವನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದ ಮಹಾನ್ ಪುರುಷರು ತ್ಯಾಗವೀರ ಸಿರಸಂಗಿ ಲಿಂಗರಾಜರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಪ್ರೊ. ಆರ್.ಎಚ್. ತಿಗಡಿ ಹೇಳಿದರು.
ಇಂದು ದೇಶದ ಬೆನ್ನೆಲುಬು ಎಂದರೆ ರೈತ ಎಂಬುವುದನ್ನು ಮನಗಂಡಿದ್ದ ಸಿರಸಂಗಿ ಲಿಂಗರಾಜರು ೧೫೦ ಎಕರೆ ಹೊಲ ಖರೀದಿಸಿ ಅಲ್ಲಿ ಕೃಷಿ ತರಬೇತಿ ಶಾಲೆಯನ್ನು ಸ್ಥಾಪಿಸಿ ರೈತರಿಗೆ ಕೃಷಿಯ ಕುರಿತು ಮಾಹಿತಿಯನ್ನು ಒದಗಿಸಿ ಅವರನ್ನು ಬಲಪಡಿಸುವಲ್ಲಿ ಶ್ರಮಿಸುವುದರ ಜೊತೆಗೆ ಭವ್ಯ ಕೆರೆಗಳನ್ನು ಕಟ್ಟಿಸಿದ್ದರು, ಸಾಮಾಜಿಕ ಕ್ರಾಂತಿಕಾರಿಗಳಾದ ಇವರು ಬಾಲ್ಯ ವಿವಾಹಗಳನ್ನು ವಿರೋಧಿಸಿದ್ದರು ಎಂದರು.
ಈ ನಾಡು ಕಂಡ ಅಪ್ರತಿಮ ದಾನವೀರ ಸಿರಸಂಗಿ ಲಿಂಗರಾಜ ದೇಸಾಯಿಯವರ ತ್ಯಾಗ ಮತ್ತು ಉದಾರ ಮನೋಭಾವ ಸದಾ ಸ್ಮರಣೀಯವಾದದ್ದು. ಸಂಘಟನೆಯೇ ಅಭಿವೃದ್ಧಿಯ ಹೆದ್ದಾರಿ ಎಂದರಿತ ಲಿಂಗರಾಜರು, ಲಿಂಗಾಯತ ಸಂಘಟನೆಯ ಪ್ರಥಮ ರೂವಾರಿ ಎನಿಸಿ, ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಪ್ರಸಿದ್ಧ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಗೆ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.ಸಾನಿಧ್ಯವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ ಜೀವನವನ್ನೆ ತಾಗ್ಯ ಮಾಡಿದ ಸಿರಸಂಗಿ ಲಿಂಗರಾಜರ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಂಪೂರ್ಣ ಪರಿಚಯ ನಾಡಿಗೆ ಮಾಡಿಕೊಡಬೇಕು. ಸ್ವಹಿತಕ್ಕಾಗಿ ಏನೂ ಮಾಡದೆ ಸರ್ವಸ್ವವನ್ನೂ ಸಮಾಜಕ್ಕಾಗಿಯೇ ಧಾರೆ ಎರೆದ ಐತಿಹಾಸಿಕ ಪುರುಷನ ಸ್ಮಾರಕಗಳು ಅನಾಥವಾಗಿವೆ. ಅವುಗಳನ್ನು ಜೀರ್ಣೋದ್ಧಾರಗೊಳಿಸಬೇಕು ಮತ್ತು ರಕ್ಷಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ ತ್ಯಾಗಮಯಿ, ಪರೋಪಕಾರಿ, ಸಿರಸಂಗಿ ಮನೆತನದ ಆಡಳಿತಗಾರ ಅವರ ಆಡಳಿತ ವಿಶ್ವದ ಎಲ್ಲಾ ಆಡಳಿತಗಾರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಯಲ್ಲಪ್ಪ ದೇಸಾಯಿ, ಶಿಕ್ಷಕರಾದ ಮಂಜುನಾಥ ನಿಂಗನಗೌಡ್ರ, ನಿಂಗಪ್ಪ ನರಗುಂದ, ಸಿದ್ದಲಿಂಗೇಶ್ವರಯ್ಯ ಹಿರೇಮಠ, ಋಕ್ಸಾನ್ ಅಮೀನನಾಯಕ್, ವೀರಯ್ಯ ಸಾಲಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.