ಮಂಗಳೂರು: ಬಹರೈನ್ ಪುಟ್ಟ ರಾಷ್ಟ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಾ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಹಲವಾರು ಸಾಧಕರನ್ನು ಪುರಸ್ಕರಿಸುವ ಸಂಪ್ರದಾಯವನ್ನು ಇರಿಸಿಕೊಂಡಿದೆ. ಈ ಸಲ ಮೊದಲ ಬಾರಿ ನೀಡಿದ ಪ್ರತಿಷ್ಠಿತ ‘ಸಹಕಾರಿ ಸಾರ್ವಭೌಮ’ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ವತಿಯಿಂದ ಶುಕ್ರವಾರ ಬಹರೈನ್ ಇಂಡಿಯನ್ ಕ್ಲಬ್ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಅದ್ದೂರಿಯ ಸಮಾರಂಭದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಸ್ಥಾಪಿಸಿದ ಮೊದಲ ‘ಸಹಕಾರಿ ಸಾರ್ವಭೌಮ’ ಪ್ರಶಸ್ತಿಯನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್ ಅವರು ಪ್ರದಾನ ಮಾಡಿದರು.ಗಣನೀಯ ಸಾಧನೆಗೆ ಪ್ರಶಸ್ತಿ:ಸಹಕಾರಿ ರಂಗದಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶಕ್ಕೆ ಮಾದರಿಯಾಗಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳ ಆರ್ಥಿಕ ಶಕ್ತಿಯಾಗಿದ್ದಾರೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಹಕಾರಿ ಸ್ವಾಮ್ಯದ ಎಸ್ ಸಿಡಿಸಿಸಿ ಬ್ಯಾಂಕ್‌ನ್ನು ಕಳೆದ 31 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿ, ರಾಷ್ಟ್ರೀಕೃತ ಬ್ಯಾಂಕುಗಳ ಸ್ಥಾನಮಾನಕ್ಕೇರಿಸಿದ ಹೆಗ್ಗಳಿಕೆ ಇವರದ್ದು . ಇವರ ವಿಶಿಷ್ಟ ಕಾರ್ಯ ವೈಖರಿಯಿಂದ ಎಸ್ ಸಿಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಉತ್ಕೃಷ್ಟ ಬ್ಯಾಂಕಿಂಗ್ ಸೇವೆ:ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ರಾಜೇಂದ್ರ ಕುಮಾರ್ ನೇತೃತ್ವದ ಎಸ್‌ಸಿಡಿಸಿಸಿ ಬ್ಯಾಂಕ್ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಜನರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕನ್ನು ಪರಿಚಯಿಸಿದ ಹೆಗ್ಗಳಿಕೆ ರಾಜೇಂದ್ರ ಕುಮಾರ್ ಅವರದ್ದು. ಸ್ವಸಹಾಯ ಸಂಘಗಳ ರಚನೆಯಲ್ಲಿ ಬ್ಯಾಂಕ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಸುಮಾರು 35,000ಕ್ಕೂ ಹೆಚ್ಚು ನವೋದಯ ಸಂಘಗಳು ರಚನೆಯಾಗಿದೆ.ಸುಮಾರು 4.00 ಲಕ್ಷಕ್ಕೂ ಹೆಚ್ಚು ನವೋದಯ ಕುಟುಂಬಗಳ ಸದಸ್ಯರು ರಾಜೇಂದ್ರ ಕುಮಾರ್ ನೇತೃತ್ವದ ನವೋದಯ ಸ್ವಸಹಾಯ ಸಂಘದಲ್ಲಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ , ಬಹರೈನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷ ಮೊಹಮ್ಮದ್ ಅಬ್ದುಲ್ ಜಬ್ಬಾರ್ ಅಲ್ ಕೂಹೆಜಿ , ಪ್ರವಾಸಿ ಭಾರತೀಯ ಪ್ರಶಸ್ತಿ ಪುರಸ್ಕೃತ ಜಿ. ಬಾಬು ರಾಜನ್, ದಿ ಇಂಡಿಯಾನ್ ಕ್ಲಬ್ ಅಧ್ಯಕ್ಷ ಜೋಸೆಫ್ ಜ್ವಾಯಿ, ಬಹರೈನ್ ಕ್ರಿಕೆಟ್ ಫೆಡರೇಶನ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಮನ್ಸೂರ್ ಕನ್ನಂಗಾರ್ ಮುಖ್ಯಅತಿಥಿಗಳಾಗಿದ್ದರು.ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಂಘಟನೆಯ ಅಧ್ಯಕ್ಷ ರಾಜ್ ಕುಮಾರ್ ಭಾಸ್ಕರ್, ಉಪಾಧ್ಯಕ್ಷ ವಿಜಯಕುಮಾರ ನಾಯ್ಕ, ಪ್ರಧಾನ ಕಾರ್ಯದರ್ಶಿ ರೋಶನ್ ಲೂಯಿಸ್, ಸಹಾಯಕ ಪ್ರಧಾನ ಕಾರ್ಯದರ್ಶಿ ವಿತಿಯಾ ಜುಮಾಲುದ್ದೀನ್, ಕೋಶಾಧಿಕಾರಿ ಮಂಗೇಶ ದೇಸಾಯಿ, ಸಮಿತಿ ಸದಸ್ಯರಾದ ಗಣೇಶ ಮಾಣಿಲ, ರಾಘವೇಂದ್ರ ಪ್ರಸಾದ್, ಮಲ್ಲಿಕಾರ್ಜುನ ಪಾಟೀಲ, ಹಿರಿಯ ಸಲಹೆಗಾರ ಅಸ್ಟೀನ್ ಸಂತೋಷ್ ಇದ್ದರು.