ಮಾಗಡಿ ಸಂಭ್ರಮಕ್ಕೆ ವಿದ್ಯುಕ್ತವಾಗಿ ತೆರೆ

KannadaprabhaNewsNetwork |  
Published : Sep 07, 2026, 01:15 AM IST
5.ಬೆಂಕಿ ರಹಿತ ಅಡುಗೆ ತಯಾರಿಕೆಯಲ್ಲಿ  ಇಬ್ಬರು ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು. | Kannada Prabha

ಸಾರಾಂಶ

ಮಾಗಡಿ: ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಪಟ್ಟಣದ ಕೋಟೆ ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಮಾಗಡಿ ಸಂಭ್ರಮ - ಫುಡ್ , ಫನ್ , ಫ್ಯಾಷನ್ ಫೆಸ್ಟಿವಲ್ ಗೆ ಭಾನುವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು

ಮಾಗಡಿ: ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಪಟ್ಟಣದ ಕೋಟೆ ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಮಾಗಡಿ ಸಂಭ್ರಮ - ಫುಡ್ , ಫನ್ , ಫ್ಯಾಷನ್ ಫೆಸ್ಟಿವಲ್ ಗೆ ಭಾನುವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು.

ವಾರಾಂತ್ಯದ ಹಿನ್ನೆಲೆಯಲ್ಲಿ ಮಾಗಡಿ ಪಟ್ಟಣ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಗಡಿ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದುಕೊಟ್ಟರು. ಶುಕ್ರವಾರ ಮತ್ತು ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಸಹಸ್ರಾರು ಜನರು ಭೇಟಿ ನೀಡಿದ್ದರು.

ಸಂಜೆ ಆಗುತ್ತಿದ್ದಂತೆ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರಿಂದ ಫೆಸ್ಟಿವಲ್ ಗೆ ಕಳೆ ಬಂದಿತು. ಜನರು ತಮ್ಮ ಕುಟುಂಬ , ಸ್ನೇಹಿತರ ಜೊತೆಗೆ ಆಗಮಿಸಿ ವಿವಿಧ ಖಾದ್ಯಗಳನ್ನು ಸವಿದು, ಶಾಪಿಂಗ್ ಮಾಡಿದರು. ರಾತ್ರಿ ಮಿಮಿಕ್ರಿ ಸಾಗರ್ ಅವರ ಹಾಸ್ಯ ಸಂಜೆ ಮತ್ತು ರಾಮ್ ಅವರ ಮ್ಯೂಸಿಕಲ್ ನೈಟ್ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಪಟ್ಟಣದಲ್ಲಿ ಮೊದಲ ಬಾರಿಗೆ ನಡೆದ ಫುಡ್ , ಫನ್ , ಫ್ಯಾಷನ್ ಫೆಸ್ಟಿವಲ್ ಆದ ಮಾಗಡಿ ಸಂಭ್ರಮಕ್ಕೆ ಮೂರು ದಿನಗಳ ಕಾಲವೂ ಜನರು ಆಗಮಿಸಿ ತಮಗಿಷ್ಟವಾದ ಗೃಹಪಯೋಗಿ ವಸ್ತುಗಳು, ಪದಾರ್ಥಗಳು ಖರೀದಿಸಿ ಮನೆಗೆ ಕೊಂಡೊಯ್ದರು. ಕರ್ನಾಟಕದ ವಿವಿಧ ಭಾಗ ಸೇರಿ ಉತ್ತರ ಭಾರತದ ವೈವಿಧ್ಯಮಯ ಖಾದ್ಯಗಳ ಆಹಾರ ಮೇಳವಿದ್ದು, ತಮಿಗಿಷ್ಟವಾದ ಖಾದ್ಯ ಸವಿದು ಖುಷಿಪಟ್ಟರು.

ಸಂಗೀತದ ರಸದೌತಣ :

ಒಂದೆಡೆ ಝಗಮಗಿಸುವ ವೇದಿಕೆ, ವೇದಿಕೆಯಲ್ಲಿದ್ದ ಗಾಯಕರು ಸುಶ್ರಾವ್ಯವಾಗಿ ಹಾಡು ಹೇಳುತ್ತಾ ಸಂಗೀತದ ರಸದೌತಣ ಉಣಬಡಿಸುತ್ತಿದ್ದರೆ , ಮತ್ತೊಂದೆಡೆ ಬಗೆ ಬಗೆಯ ಖಾದ್ಯಗಳು ಜನರನ್ನು ಸೆಳೆದವು. ರುಚಿಯಾದ ಹಲವು ವೆರೈಟಿಯ ದೋಸೆ, ಬಜ್ಜಿ - ಬೋಂಡ, ಪಾಪ್ ಕಾರ್ನ್ , ನೈಸರ್ಗಿಕ ಜ್ಯೂಸ್ , ಪಡ್ಡು, ಮಶ್ರೂಮ್ ಬಿರಿಯಾನಿ ಸೇರಿದಂತೆ ಹಲವು ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿತ್ತು.

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಫ್ರೀಡಂ ಆಯಿಲ್ ಪ್ರಸ್ತುತ ಪಡಿಸಿದ್ದ ಈ ಫುಡ್ , ಫನ್ , ಫ್ಯಾ,ನ್ ಫೆಸ್ಟಿವಲ್ ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗದೆ ಶಾಪಿಂಗ್ ಗೌ ಹೇಳಿ ಮಾಡಿಸಿದಂತಿತ್ತು.

ಮಹಿಳೆಯರ ಮನಕ್ಕೊಪ್ಪುವ ವಿವಿಧ ರೀತಿಯ ವಸ್ತ್ರಗಳು, ಆಭರಣಗಳು, ಕೈಮಗ್ಗದ ವಸ್ತುಗಳು, ಗೃಹಪಯೋಗಿ ವಸ್ತುಗಳೂ ಈ ಮೇಳದಲ್ಲಿ ಇದ್ದದ್ದು ವಿಶೇಷವಾಗಿತ್ತು.

ಮಕ್ಕಳ ಪ್ರತಿಭೆ ಅನಾವರಣ :

ಈ ಮೇಳದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಮೂಲಕ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಯಿತು. ಅಲ್ಲದೆ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬೆಳಗ್ಗೆ 11 ಗಂಟೆಗೆ ಮಕ್ಕಳು ಪ್ರದರ್ಶಿಸಿದ ಭರತ ನಾಟ್ಯ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಬೆಂಕಿ ರಹಿತ ಅಡುಗೆ ತಯಾರಿಕೆಯಲ್ಲಿ ಇಬ್ಬರು ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಇದಾದ ನಂತರ 8,9 ,10ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಭಾಗ ವಹಿಸಿದ್ದರು. ಸ್ಪರ್ಧೆಯಲ್ಲಿ 8ನೇ ತರಗತಿಯ 4 ಮಕ್ಕಳು, 9ನೇ ತರಗತಿಯ 3 ಮಕ್ಕಳು ಹಾಗೂ 10ನೇ ತರಗತಿಯ 3 ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

10 ಮಂದಿ ಅದೃಷ್ಟದ ವಿಜೇತರು :

ಮಾಗಡಿ ಸಂಭ್ರಮ ವೀಕ್ಷಣೆಗೆ ಆಗಮಿಸಿದ್ದ ಜನರು ತಮ್ಮ ಹೆಸರು ಬರೆದು ಪೆಟ್ಟಿಗೆಯಲ್ಲಿ ಹಾಕಿದ್ದರು. ಗಂಟೆಗೆ ಒಂದರಂತೆ ಒಟ್ಟು 10 ಮಂದಿ ವಿಜೇತರಿಗೆ ರುಶಿಕಾ ಗೋಲ್ಡ್ ವತಿಯಿಂದ ಬೆಳ್ಳಿ ನಾಣ್ಯಗಳನ್ನು ನೀಡಲಾಯಿತು.

ವಿಡಿಯೋ ಚಿತ್ರದ ನಾಯಕ ನಟ ದೀಕ್ಷಿತ್ ಶೆಟ್ಟಿ ಭೇಟಿ ನೀಡಿ ಆಹಾರ ಮೇಳದ ಮೆರಗು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಕನ್ನಡಪ್ರಭ ಮಾಗಡಿ ವರದಿಗಾರ ಮಾದೇಶ್ ಹಾಗೂ ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಜಗದೀಶ್ (ಯೋಗೇಶ್ ) ಅವರನ್ನು ಸನ್ಮಾನಿಸಲಾಯಿತು.

ಏಷ್ಯಾನೆಟ್ ಸುವರ್ಣ ನ್ಯೂಸ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಅನಿಲ್ ಸುರೇಂದ್ರ, ಇವೆಂಟ್ ವೈಸ್ ಪ್ರೆಸಿಡೆಂಟ್ ವಿಜಯ್ ಕುಮಾರ್, ಅಸೋಸಿಯೆಟ್ ವೈಸ್ ಪ್ರೆಸಿಡೆಂಟ್ ಎಂ.ಬಿ.ಶ್ರೀನಿವಾಸ್ , ವೈಸ್ ಪ್ರೆಸಿಡೆಂಟ್ ಪ್ರದೀಪ್, ಸ್ಪೆಷಲ್ ಪ್ರಾಜೆಕ್ಟ್ ಎಡಿಟರ್ ವಿನೋದ್ ಬಿ.ನಾಯ್ಕ, ಸುವರ್ಣ ನ್ಯೂಸ್ ಡಿಜಿಎಂ ರಾಕೇಶ್, ಜಾಹೀರಾತು ವಿಭಾಗದ ಮಹೇಶ್, ನರಸೇಗೌಡ ಮತ್ತಿತರರು ಉಪಸ್ಥಿತರಿದ್ದರು.

--------------------------------

...ಬಾಕ್ಸ್ ...

ಸಂಭ್ರಮಕ್ಕೆ ಮಕ್ಕಳ ಸಂಭ್ರಮದ ಸಾಕ್ಷಿ!

ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಿಂದ ಮಾಗಡಿ ಸಂಭ್ರಮಕ್ಕೆ ಚಿಕ್ಕಪುಟ್ಟ ಮಕ್ಕಳು ಮತ್ತಷ್ಟು ರಂಗು ತಂದರು. ಇಲ್ಲಿನ ಕೋಟೆ ಮೈದಾನದಲ್ಲಿ ನಡೆದ ಸಂಭ್ರಮದ ಕಡೆಯ ದಿನವಾದ ಭಾನುವಾರ ಮಕ್ಕಳ ಸಂಭ್ರಮ, ಮಕ್ಕಳ ಕಲರವ ಗಮನ ಸೆಳೆಯಿತು. ಮುದ್ದು ಮಕ್ಕಳಿಗಾಗಿ ಮುದ್ದು ಮಗು ಪ್ರದರ್ಶನದಲ್ಲಿ ಪಾಲಕರು ಸಹ ಉತ್ಸಾಹದಿಂದ ಭಾಗಿಯಾಗಿದ್ದರು. ತಮ್ಮ ಮುದ್ದು ಮಕ್ಕಳನ್ನು ಸಿಂಗರಿಸಿ ಕರೆ ತಂದಿದ್ದ ಹೆತ್ತವರು, ಅಜ್ಜ-ಅಜ್ಜಿ, ಬಂಧು-ಬಳಗದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮುದ್ದು ಮಗು ಸರ್ಧೆ ಬಳಿಕ 7 ವರ್ಷದ ಮಕ್ಕಳಿಗೆ ವೇಷಭೂಷಣ ಪ್ರದರ್ಶನ ನಡೆಯಿತು. ಮಾಗಡಿ ಸಂಭ್ರಮದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದ ಪೋಷಕರು ಮುಂದಿನ ವರ್ಷವೂ ಇದಕ್ಕಿಂತ ದೊಡ್ಡ ಮಟ್ಟದ ಸಂಭ್ರಮ ಮಾಡುವಂತೆ ಮನವಿ ಮಾಡಿದರು

--------------------------------------

...ಕೋಟ್ ...

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜಿಸಿರುವ ಮಾಗಡಿ ಸಂಭ್ರಮ ತುಂಬಾ ಯಶಸ್ವಿಯಾಗಿ ಮೂಡಿ ಬಂದಿದೆ. ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಿದ್ದು ಖುಷಿ ತಂದಿತು. ಇಂತಹ ವಿಭಿನ್ನವಾದ ಕಾರ್ಯಕ್ರಮಗಳು ಆಗಿಂದಾಗೆ ನಡೆಯುತ್ತಿರಬೇಕು. ನಮ್ಮಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗಲಿದೆ.

- ಸೌಮ್ಯಗೌಡ, ಮಾಗಡಿ.

------------------------------------

...ಕೋಟ್ ...

ಮಾಗಡಿ ನೆಲವು ಕಲೆ, ಸಾಹಿತ್ಯ , ಸಂಗೀತ, ನೃತ್ಯ, ಜನಪದ ರಂಗಭೂಮಿ ಸೇರಿದಂತೆ ಎಲ್ಲವೂ ಒಳಗೊಂಡಿದೆ. ಇಲ್ಲಿನ ಕೋಟೆ ಮೈದಾನದಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ವಿಶೇಷವಾಗಿ ಮಾಗಡಿ ಸಂಭ್ರಮ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

- ಮಾರಣ್ಣ, ಪತ್ರಕರ್ತರು, ಮಾಗಡಿ.

-----------------------------------

6ಕೆಆರ್ ಎಂಎನ್ 5,6,7.ಜೆಪಿಜಿ

5.ಬೆಂಕಿ ರಹಿತ ಅಡುಗೆ ತಯಾರಿಕೆಯಲ್ಲಿ ಇಬ್ಬರು ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

6.ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

7.ಮಾಗಡಿ ಸಂಭ್ರಮಕ್ಕೆ ಭೇಟಿ ನೀಡಿದ ವಿಡಿಯೋ ಚಿತ್ರದ ನಾಯಕ ನಟ ದೀಕ್ಷಿತ್ ಶೆಟ್ಟಿ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

----------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರು ಪೂರೈಸಲು ಒತ್ತಾಯಿಸಿ ರಸ್ತೆ ತಡೆ ಚಳುವಳಿ
ಹೋರಾಟದ ಹಾದಿ ಹಿಡಿದಾದರು ಬರ ಪರಿಹಾರ ಪಡೆಯುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ