ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ರೈತರಿಗೆ ಕಡಿಮೆ ಬೆಲೆಗೆ ಹಾಗೂ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಿದರೆ ಅದೇ ನೀವು ರೈತರಿಗೆ ಮಾಡುವ ದೊಡ್ಡ ಉಪಕಾರವಾಗಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.ಪಟ್ಟಣದಲ್ಲಿ ರೈತರಿಗೋಸ್ಕರ ಸ್ಥಾಪನೆ ಮಾಡಿರುವ ಸೀತಾರಾಮ ಆಗ್ರೋ ರೈತ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗೆ ಯಾವುದೇ ಬೆಲೆ ಇಲ್ಲ, ಯಾವುದೇ ಬೆಳೆ ಇರಲಿ ಅದಕ್ಕೆ ನಿರ್ದಿಷ್ಟವಾದ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿದೆ. ಒಂದು ಪೆನ್ನು ಕೊಳ್ಳಬೇಕೆಂದರೆ ಅದರ ಮೇಲೆ ಅದರ ಬೆಲೆ ನಿಗದಿಯಾಗಿರುತ್ತದೆ, ಆದರೆ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಿರುವುದು ನಮ್ಮ ದೇಶದ ಒಂದು ದೊಡ್ಡ ದುರಂತ ಎಂದು ಅವರು ವಿಷಾದಿಸಿದರು.ರೈತರು, ಮಳೆ, ಬಿಸಿಲು, ರಾತ್ರಿ. ಹಗಲು ಎನ್ನದೆ ಕಷ್ಟಪಟ್ಟು ಬೆವರು ಸುರಿಸಿ ಹೊಗೆಸೊಪ್ಪು ಬೆಳೆಯುತ್ತಾರೆ. ಆದರೆ ಎಲ್ಲ ತಂಬಾಕು ಬೆಳೆಗಾರರಿಗೂ ಲಕ್ಷಗಟ್ಟಲೆ ಬ್ಯಾಂಕಿನಲ್ಲಿ ಸಾಲವಿದೆ, ರೈತರು ಲಾಭ ಮಾಡುವುದು ಯಾವಾಗ? ಎಂದು ಅವರು ಪ್ರಶ್ನಿಸಿದರು.
ರೈತರಿಗೆ ರಾಜಕಾರಣಿಗಳು ಮೋಸ ಮಾಡುತ್ತಿದ್ದಾರೆ, ಕೇವಲ ರೈತರ ಮೂಗಿಗೆ ತುಪ್ಪ ಸವರುತ್ತಾರೆ, ನಮ್ಮ ತಂಬಾಕನ್ನು ಕೇವಲ ನೂರು ರು. ಕೆಜಿಗೆ ತೆಗೆದುಕೊಳ್ಳುತ್ತಾರೆ, ಅದೇ ತಂಬಾಕು ವಿದೇಶದಲ್ಲಿ ಕೆಜಿಗೆ 2 ಸಾವಿರ ದರವಿದೆ. ಸರ್ಕಾರವೇ ನೇರವಾಗಿ ತಂಬಾಕು ಖರೀದಿ ಮಾಡಬೇಕು, ಆ ಮುಖಾಂತರ ರೈತರನ್ನು ಸಾಲದ ಸುಳಿಯಿಂದ ಪಾರು ಮಾಡಬೇಕಾಗಿದೆ ಎಂದರು.ಜಿಲ್ಲೆಯ ಉತ್ತಮ ಬೆಳೆ ಬೆಳೆದ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. ರೈತ ಮುಖಂಡರಾದ ಶಿವಕುಮಾರ್, ತಾಲೂಕು ರೈತ ಸಂಘದ ಅಧ್ಯಕ್ಷ ಸ್ವಾಮಿಗೌಡ. ಶಿವಗೌಡ, ವೆಂಕಟೇಶ್, ಚಂದ್ರೇಗೌಡ, ಹುಣಸೂರು ಉಮೇಶ್, ನಾಗಮಂಗಲ ಸಂತೋಷ್, ಜವರೇಗೌಡ, ಮಲಿನಾಥಪುರ ಗಣೇಶ ಇದ್ದರು.