ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಏ.4ರಂದು ಬೃಹತ್ ಮೆರವಣಿಗೆಯ ಮೂಲಕ ಬೆಳಗ್ಗೆ 11 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅಂದು ಬೆಳಗ್ಗೆ 9 ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಬಿಜೆಪಿ ಚುನಾವಣಾ ಕಾರ್ಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗುವುದು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನೀಲ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಅಭ್ಯರ್ಥಿ ಬೃಜೇಶ್ ಚೌಟ ಈಗಾಗಲೇ ಕ್ಷೇತ್ರದ ಎಲ್ಲ ಮಂಡಲಗಳ, 61 ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಎಲ್ಲ ಶಕ್ತಿಕೇಂದ್ರ ಹಾಗೂ ಬೂತ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆದಿದೆ. ಏ.6ರಿಂದ ಲೋಕಸಭಾ ಕ್ಷೇತ್ರದಾದ್ಯಂತ ಮೂರು ಹಂತದಲ್ಲಿ ಚುನಾವಣಾ ಪ್ರಚಾರ, ಮನೆ ಮನೆ ಭೇಟಿ ನಡೆಯಲಿದೆ. ಏ.21ರಂದು ಮಹಾ ಸಂಪರ್ಕ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲ ಮನೆಗಳನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.
5ರಂದು ಸ್ಮೃತಿ ಇರಾನಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಏ.5ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಇನ್ನಷ್ಟೆ ಅವರ ಕಾರ್ಯಕ್ರಮ ನಿಗದಿ ಆಗಬೇಕಿದೆ. ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ, ರಾಜ್ಯದ ಪ್ರಮುಖರನ್ನು ಆಹ್ವಾನಿಸಿದ್ದೇವೆ. ಯಾರ್‍ಯಾರು ಆಗಮಿಸುತ್ತಾರೆ ಇನ್ನಷ್ಟೇ ಗೊತ್ತಾಗಬೇಕಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಲೋಕಸಭಾ ಚುನಾವಣೆ ಸಂಚಾಲಕ ನಿತಿನ್ ಕುಮಾರ್, ದಕ್ಷಿಣ ಮಂಡಲ ಪ್ರಭಾರಿ ರವಿಶಂಕರ ಮಿಜಾರ್, ಕೋಶಾಧಿಕಾರಿ ಸಂಜಯ ಪ್ರಭು ಇದ್ದರು.ಸತ್ಯಜಿತ್ ಹೇಳಿಕೆ ಬಗ್ಗೆ ಹಿರಿಯರ ಜತೆ ಚರ್ಚೆ
ಸತ್ಯಜಿತ್ ಸುರತ್ಕಲ್ ಅವರು ಈಗ ಬಿಜೆಪಿಯಲ್ಲೇ ಇದ್ದಾರೆ. ಪಕ್ಷದಿಂದ ಅವರನ್ನು ಹೊರಹಾಕಿಲ್ಲ. ಬಿಲ್ಲವರು ಬಿಲ್ಲವ ಅಭ್ಯರ್ಥಿಗೆ ಮತ ನೀಡಬೇಕು ಎಂಬುದು ಅವರ ವೈಯಕ್ತಿಕ ಹೇಳಿಕೆ. ಅವರ ಇತರ ಹೇಳಿಕೆ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹಿರಿಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸತೀಶ್ ಕುಂಪಲ ಪ್ರತಿಕ್ರಿಯಿಸಿದರು.