ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ಎಲ್ಲ ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರನ್ನು ಒದಗಿಸುವುದು ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಘಡಗಳು ಹಾಗೂ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಒಂದು ದಿನದ ಕಾರ್ಯಗಾರದಲ್ಲಿ ಕುಡಿಯುವ ನೀರಿನ ಜಾಗೃತಿ ಕುರಿತಾದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಮಳೆಗಾಲ ಆರಂಭಗೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಮಳೆ ನೀರು ನಿಂತು ಕಲುಷಿತವಾದ ವಾತಾವರಣದಿಂದ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಹಾಗೂ ನೀರು ಸರಬರಾಜು ಮಾಡುವ ಪೈಪ್‌ಗಳು ಹಾಳಾಗಿದ್ದರೇ ಕೂಡಲೇ ದುರಸ್ತಿಗೊಳಿಸಿ ಶುದ್ಧ ನೀರನ್ನೇ ಪೂರೈಸಬೇಕು ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದ್ದು, ಅದನ್ನು ಪಿಡಿಒ, ವಾಟರಮನ್ ಸೇರಿದಂತೆ ಗ್ರಾಪಂ ಸಿಬ್ಬಂದಿಯು ನಿರ್ವಹಿಸಬೇಕು. ಪೈಪ್‌ಲೈನ್‌ಗಳು ಹಾಳಾಗಿದ್ದರೇ, ಒಡೆದಿದ್ದರೇ ಮಳೆ ನೀರು ಮಿಶ್ರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ತಕ್ಷಣವೇ ಅವುಗಳನ್ನು ಸರಿಪಡಿಸುವ ಮೂಲಕ ಮುಂದೆ ಸಂಭವಿಸುವ ಅಪಾಯವನ್ನು ತಡೆಗಟ್ಟಬೇಕು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ತಾಪಂ ಇಒ ಸುಭಾಸ ಸಂಪಗಾಂವಿ, ಸವದತ್ತಿ ತಾಪಂ ಇಒ ಯಶವಂತಕುಮಾರ ಮಾತನಾಡಿ, ಗ್ರಾಮಗಳಲ್ಲಿನ ನೀರಿನ ಟ್ಯಾಂಕ್‌ಗಳನ್ನು ವಾಟರಮನ್‌ಗಳು ಆಗಾಗ ಶುಚಿಗೊಳಿಸಿ, ಈಗಾಗಲೇ ವಿತರಿಸಿರುವ ಎಫ್‌ಟಿಕೆ ಕಿಟ್‌ಗಳ ಮೂಲಕ ನೀರು ಪರೀಕ್ಷಿಸಿ ಸಂಬಂಧಿಸಿದ ತಾಪಂಗೆ ವರದಿ ಸಲ್ಲಿಸಬೇಕು ಎಂದರು. ಇದೇ ವೇಳೆ ಎಲ್ಲ ಗ್ರಾಮ ಪಂಚಾಯತಿಗಳಿಗೆ ಎಫ್‌ಟಿಕೆ ಕಿಟ್ ಮೂಲಕ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅಲ್ಲದೇ, ಕುಡಿಯುವ ನೀರಿನ ಜಾಗೃತಿ ಕುರಿತಾದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.