ಬೆಂಗಳೂರು : ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ ಆಯೋಜಿಸಲು ನಿರ್ಧರಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿದ ಸಿಎಂ, ಸಮ್ಮೇಳನಕ್ಕೆ ಶುಭಕೋರಿದರು. ಲಾಂಛನದಲ್ಲಿ ಏನಿದೆ?: ಸಕ್ಕರೆಯ ನಾಡು, ಅಕ್ಕರೆಯ ಬೀಡು ಎಂಬ ಧ್ಯೇಯವಾಕ್ಯಗಳೊಂದಿಗೆ ರೂಪುಗೊಂಡ ಲಾಂಛನ, ಮಂಡ್ಯದ ಅಸ್ಮಿತೆ, ಕಾವೇರಿ ನದಿ, ಕಬ್ಬು, ಬಿಸಿ ಬೆಲ್ಲ, ಹಸಿ ಭತ್ತ ಹಾಗೂ ನೇಗಿಲಯೋಗಿ ರೈತನನ್ನು ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದರು.
ಲಾಂಛನ ಕೆಳಭಾಗ: ಶಿವನ ಸಮುದ್ರ, ಗಗನಚುಕ್ಕಿ ಜಲಪಾತ, ನೇಗಿಲಯೋಗಿ ರೈತ, ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಮೈಶುಗರ್ ಕಾರ್ಖಾನೆ, ಸಮ್ಮೇಳನದ ದಿನಾಂಕ ಇದೆ.
ಮಧ್ಯಭಾಗ: ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನ ಹಾಗೂ ಮಂಡ್ಯ ಜಿಲ್ಲೆಯ ಸಂಸ್ಥಾಪಕರಾದ ನಾಲ್ವಡಿಯವರ ಭಾವಚಿತ್ರ ಇದೆ.
ಲಾಂಛನದ ಒಳಭಾಗ: ಕೃಷ್ಣರಾಜ ಸಾಗರ- ಕನ್ನಂಬಾಡಿ ಅಣೆಕಟ್ಟೆಯ ವಿಹಂಗಮ ನೋಟ, ತಾಯಿ ಕಾವೇರಿ, ರಂಗನತಿಟ್ಟು ಪಕ್ಷಿಧಾಮ, ಭತ್ತ, ಕಬ್ಬು, ಕಬ್ಬಿನ ಹೂ ಇವುಗಳಿಂದ ಅಲಂಕೃತವಾಗಿದೆ.
ಲಾಂಛನದ ಮೇಲ್ಮೈ: ನಾಡದೇವತೆ ಭುವನೇಶ್ವರಿ ಹಾಗೂ ಕನ್ನಡದ ಬಾವುಟ ಇದ್ದು, ಕನ್ನಡದ ಅಸ್ಮಿತೆ ಮತ್ತು ಮಂಡ್ಯದ ಅನನ್ಯತೆ ಹಾಗೂ ಹೆಗ್ಗುರುತುಗಳನ್ನು ಲಾಂಛನ ಒಳಗೊಂಡಿದೆ. ಈ ಲಾಂಛನವನ್ನು ಕಲಾವಿದ ಶಂಕರ್ ಅವರು ರಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಈ ನೆಲದ ಸಂಸ್ಕೃತಿ ಪ್ರತಿಬಿಂಬಿಸುವುದರೊಂದಿಗೆ ಅರ್ಥಪೂರ್ಣ, ವೈವಿಧ್ಯಮಯವಾಗಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಯೋಜಿಸಬೇಕಿದ್ದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಳಗೊಂಡಂತೆ ಪ್ರತಿಯೊಬ್ಬರ ಸಹಕಾರ ಪಡೆದು ವೈಭವಯುತವಾಗಿ ಸಮ್ಮೇಳನ ನಡೆಸುವುದಾಗಿ ತಿಳಿಸಿದರು.
ಶಾಸಕರಿಗೆ ನೇತೃತ್ವ ನೀಡಿ: ಸಮ್ಮೇಳನದ ಎಲ್ಲಾ ಸಮಿತಿಗಳಲ್ಲಿ ಶಾಸಕರುಗಳಿಗೆ ನೇತೃತ್ವ ನೀಡಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಜಿಲ್ಲೆಯ ಸಂಘಟನೆಗಳನ್ನು, ರಾಜ್ಯದ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ಸಮಿತಿಗಳ ನಡುವೆ ಯಾವುದೇ ಗೊಂದಲವಿಲ್ಲದಂತೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಲಾಂಛನ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ಡಾ.ಮಹೇಶ್‌ಜೋಶಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರ, ಉದಯಗೌಡ, ವಿಧಾನ ಪರಿಷತ್ತು ಸದಸ್ಯ ದಿನೇಶ್‌ಗೂಳಿಗೌಡ, ಕಸಾಪ ಗೌರವ ಕಾರ್ಯದರ್ಶಿ ರಾಮಲಿಂಗಾಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.