ಅಧ್ವಾನ, ಆಶಯಗಳೊಂದಿಗೆ ಮಂಡ್ಯ ಸಮ್ಮೇ‍ಳನಕ್ಕೆ ತೆರೆ - ಅಕ್ಷರ ಜಾತ್ರೆ ಮುಗಿಸಿ ಬಳ್ಳಾರಿಯತ್ತ ರಥ ಮುಖ

ಸಾರಾಂಶ

ಕನ್ನಡ ಭಾಷೆಯಾಗಲಿ, ರಾಷ್ಟ್ರಕವಿಗಳ ಹೆಸರು ಘೋಷಣೆಯಾಗಲಿ, ಕನ್ನಡ ಶಾಲೆಗಳು ಅಭಿವೃದ್ಧಿಯಾಗಲಿ, ಹಳೇ ನಿರ್ಣಯಗಳು ಜಾರಿಯಾಗಲಿ ಮುಂತಾದ ಆಶಯಗಳನ್ನು ಹೊತ್ತುಕೊಂಡು, ಸಮ್ಮೇಳನದ ರಥ ಬಳ್ಳಾರಿಯತ್ತ ಮುಖ ಮಾಡಿತು

ಜೋಗಿ

 ಮಂಡ್ಯ : ಕನ್ನಡ ಭಾಷೆಯಾಗಲಿ, ರಾಷ್ಟ್ರಕವಿಗಳ ಹೆಸರು ಘೋಷಣೆಯಾಗಲಿ, ಕನ್ನಡ ಶಾಲೆಗಳು ಅಭಿವೃದ್ಧಿಯಾಗಲಿ, ಹಳೇ ನಿರ್ಣಯಗಳು ಜಾರಿಯಾಗಲಿ ಮುಂತಾದ ಆಶಯಗಳನ್ನು ಹೊತ್ತುಕೊಂಡು, ಸಮ್ಮೇಳನದ ರಥ ಬಳ್ಳಾರಿಯತ್ತ ಮುಖ ಮಾಡಿತು. ಸಾಹಿತ್ಯಾಸಕ್ತರ ಹೊಳೆ, ಅಕಾಲಿಕ ಮಳೆ, ತಪ್ಪಿಸಲಾಗದ ಅಧ್ವಾನಗಳ ಹುಲುಸು ಬೆಳೆಯ ನಡುವೆಯೇ ಸಮ್ಮೇಳನ ಹೇಗಿರಬೇಕು ಮತ್ತು ಹೇಗಿರಬಾರದು ಎನ್ನುವುದಕ್ಕೂ ಮಂಡ್ಯ ಸಾಹಿತ್ಯ ಸಮ್ಮೇಳನ ಮಾದರಿಯಾಯಿತು.

ಸಮ್ಮೇಳನದ ಅಧ್ಯಕ್ಷರಾದ ಗೊರುಚ ತಮ್ಮ ಭಾಷಣದ ಉದ್ದಕ್ಕೂ ಮುಖ್ಯಮಂತ್ರಿಗಳನ್ನು ಓಲೈಸುವುದರಲ್ಲೇ ತೊಡಗಿದ್ದರು ಎಂಬ ವ್ಯಾಪಕವಾದ ಟೀಕೆ ಕೇಳಿಬಂತು. ಸಾಹಿತ್ಯ ಹಿನ್ನಡೆ, ರಾಜಕೀಯ ಮುನ್ನಡೆ ಇರುವಂತೆ ಕಂಡ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿ, ಮುಖ್ಯಮಂತ್ರಿಗಳನ್ನು ಮೆಚ್ಚಿಕೊಂಡು ಮಾತಾಡಿದ್ದನ್ನು ಸಮ್ಮೇಳನಾಧ್ಯಕ್ಷರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದವರು ಪ್ರಸ್ತಾಪ ಮಾಡಲಿಲ್ಲ. ಅಷ್ಟೇ ಅಲ್ಲ, ಸಮ್ಮೇಳನದ ಯಾವ ಗೋಷ್ಠಿಯಲ್ಲೂ ಮುಖ್ಯವಾದ ವಾಗ್ವಾದಗಳು ನಡೆಯಲಿಲ್ಲ. ಕೆಲವು ಗೋಷ್ಠಿಗಳಲ್ಲಿ ಮಾತಾಡಿದವರ ಆಕ್ರೋಶ ಪರಿಷತ್ತು ಸರಿಯಾದ ವ್ಯವಸ್ಥೆ ಮಾಡಲಿಲ್ಲ ಎನ್ನುವುದರ ಕುರಿತಾಗಿತ್ತೇ ಹೊರತು, ತಾವು ಮಾತಾಡಬೇಕಾದ ವಿಚಾರಗಳ ಬಗ್ಗೆ ಇರಲಿಲ್ಲ.

ಈ ಸಲದ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು ಮಂಡ್ಯ, ಮದ್ದೂರು, ರಾಮನಗರ, ಮೈಸೂರು, ಶ್ರೀರಂಗಪಟ್ಟಣ ಮತ್ತು ಆಸುಪಾಸಿನ ಹಳ್ಳಿಗಳ ರೈತಾಪಿ ಮಂದಿ ಮತ್ತು ದೊಡ್ಡ ಸಂಖ್ಯೆಯಲ್ಲಿ ಬಂದ ಶಾಲಾ ವಿದ್ಯಾರ್ಥಿಗಳು. ಪುಸ್ತಕ ಮಳಿಗೆಗಳಲ್ಲಿ ಶಾಲಾ ಮಕ್ಕಳು ಇರುವೆಗಳಂತೆ ಸಾಲುಗಟ್ಟಿ ಬಂದು ''ಪುಸ್ತಕಗಳ ದರ್ಶನ'' ಪಡೆದರು. ಶಿಕ್ಷಕ ಶಿಕ್ಷಕಿಯರು ಅಲ್ಲಲ್ಲಿ ನಿಂತು ಮಕ್ಕಳಿಗೆ ಸಾಹಿತ್ಯದ ಪರಿಚಯ ಮಾಡಿಕೊಡಲು ಯತ್ನಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಕನ್ನಡದ ಅಳಿವು ಉಳಿವು ಸರ್ಕಾರಿ ಪ್ರಾಥಮಿಕ ಶಾಲೆಯ ಬೋಧಕ ವರ್ಗದ ಕೈಯಲ್ಲಿರುತ್ತದೆ ಅನ್ನುವುದನ್ನು ಇದು ಸೂಚಿಸುವಂತಿತ್ತು.

ಪುಸ್ತಕ ಮಳಿಗೆಗಳಿಗೆ ಮಂದಿ ಸಂಖ್ಯೋಪಸಂಖ್ಯೆಯಲ್ಲಿ ನುಗ್ಗಿದರೂ, ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಕುದುರಲಿಲ್ಲ. ಜೇಬಲ್ಲಿ ದುಡ್ಡಿಲ್ಲ, ಇಂಟರ್‌ನೆಟ್ ಸಿಕ್ಕಲ್ಲ ಅನ್ನುವ ಸ್ಥಿತಿಯಲ್ಲಿ ಪುಸ್ತಕ ಆಸಕ್ತರು ಕೂಡ ನಿರಾಶೆಯಿಂದ ಮರಳಬೇಕಾಯಿತು. ಆಹಾರ ಮಳಿಗೆಗಳ ಸ್ಥಿತಿಯೂ ಹಾಗೇ ಇತ್ತು. ಆದರೆ ಈ ಸಲ ಊಟೋಪಚಾರದ ವ್ಯವಸ್ಥೆಯಲ್ಲಿ ಅಂಥ ಅಧ್ವಾನವೇನೂ ಆಗದೇ ಇದ್ದಕಾರಣ ಯಾರೂ ಉಪವಾಸ ಬೀಳುವ ಪರಿಸ್ಥಿತಿ ಇರಲಿಲ್ಲ.

ಶೌಚಾಲಯದ ವ್ಯವಸ್ಥೆಯಲ್ಲಿ ತಾನಿನ್ನೂ ಸುಧಾರಿಸಬೇಕು ಅನ್ನುವುದನ್ನು ಪರಿಷತ್ತು ಮತ್ತೊಮ್ಮೆ ಸಾಬೀತು ಮಾಡಿತು. ಮಹಿಳೆಯರು, ಮಕ್ಕಳು, ಹಿರಿಯ ಪ್ರಜೆಗಳು, ಪುಸ್ತಕ ಮಳಿಗೆಗಳಲ್ಲಿ ಇದ್ದ ಪ್ರಕಾಶಕರು, ಗಣ್ಯರು ಮತ್ತು ಸಂಪನ್ಮೂಲ ವ್ಯಕ್ತಿಗಳು ಶೌಚಾಲಯದ ವಿಚಾರದಲ್ಲಿ ಸಮಾನದುಃಖಿಗಳಾಗಿದ್ದರು.

ಈ ಸಲದ ಗೋಷ್ಠಿಗಳ ಆಯ್ಕೆಯೂ ಸಾಧಾರಣವಾಗಿತ್ತು. ಹೊಸ ಹೊಳಹು ಕೊಡುವಂಥ ವಿಚಾರಗಳು ಇರಲಿಲ್ಲ. ಪರಿಷತ್ತಿನ ಥಿಂಕ್ ಟ್ಯಾಂಕ್ ಖಾಲಿಯಾಗಿದೆ ಅನ್ನುವುದನ್ನು ಎತ್ತಿ ತೋರಿಸುವಂತೆ ತೀರಾ ಸಾಧಾರಣ ಮಟ್ಟದ ಗೋಷ್ಠಿಗಳನ್ನು ಸಮಾನಾಂತರ ವೇದಿಕೆಯಲ್ಲಿ ಏರ್ಪಡಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಲ್ಲಿ ಅನೇಕರು ಯಾವ ಪೂರ್ವಸಿದ್ಧತೆಯೂ ಇಲ್ಲದೇ, ಆ ಕ್ಷಣದ ಪವಾಡವನ್ನು ನಂಬಿದವರಂತೆ ಮಾತಾಡಿ ಕಾರ್ಯಕ್ರಮ ಮುಗಿಸಿದರು.

ಸಾಹಿತಿಗಳ ಸಂಖ್ಯೆ ಕಡಿಮೆ: ಬೆಂಗಳೂರು ಮತ್ತು ಮೈಸೂರು ಸಮೀಪದಲ್ಲಿದ್ದರೂ, ಸಾಹಿತಿಗಳ ಭಾಗವಹಿಸುವಿಕೆ ತೀರಾ ಕಡಿಮೆ ಇತ್ತು. ಗೋಷ್ಠಿಯಲ್ಲಿ ಭಾಗಿಯಾದವರನ್ನು ಬಿಟ್ಟರೆ ಕೇವಲ ಬೆರಳೆಣಿಕೆಯ ಲೇಖಕರು ಅಲ್ಲಲ್ಲಿ ಆಗೀಗ ಕಾಣಿಸಿಕೊಂಡಿದ್ದರು. ಮಿಕ್ಕಂತೆ ಸಾಹಿತ್ಯಕ್ಕೂ ಸಮ್ಮೇಳನಕ್ಕೂ ಸಂಬಂಧ ಇಲ್ಲ ಎಂಬಂತೆ ಈ ಸಲವೂ ಲೇಖಕರು ವರ್ತಿಸಿದ್ದನ್ನು ನೋಡಬಹುದಾಗಿತ್ತು.

ಅನಿವಾಸಿ ಕನ್ನಡಿಗರ ಗೋಷ್ಠಿ, ಪ್ರಕೃತಿ ವಿಕೋಪದ ಆತಂಕ, ಭಾಷಾ ಅಭಿವೃದ್ಧಿ ಅಧಿನಿಯಮ, ಕೃಷಿ ಮತ್ತು ಕೃಷಿಕರ ಸಂಕಷ್ಟ, ನೆಲಜಲ ಸಾಕ್ಷರತೆ, ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ- ಇವೆಲ್ಲ ಹೊಸತನಕ್ಕೆ ಸಾಕ್ಷಿಯಾಗಿದ್ದರೆ, ಶತಮಾನೋತ್ಸವ ವರ್ಷದ ಲೇಖಕರು ಗೋಷ್ಠಿಯಲ್ಲಿ ಶಾಂತರಸ, ಕುಶಿ ಹರಿದಾಸಭಟ್ಟ, ನಿರಂಜನ, ಆಮೂರ ಮುಂತಾದ ಸಾಹಿತಿಗಳ ಜತೆ, ಚಲನಚಿತ್ರ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಹೆಸರನ್ನೂ ಸೇರಿಸಲಾಗಿತ್ತು.

ಈ ಬಾರಿ ಆಹ್ವಾನ ಪತ್ರಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಫೋಟೋ ಮಾತ್ರ ಪ್ರಕಟಿಸಲಾಗಿತ್ತು. ಹಿಂದಿನ ಸಮ್ಮೇಳನಗಳಂತೆ ಪರಿಷತ್‌ ಅಧ್ಯಕ್ಷರು ತಮ್ಮ ಫೋಟೋವನ್ನು ವೇದಿಕೆ ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಿಕೊಂಡಿರಲಿಲ್ಲ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಬಾಡೂಟಕ್ಕೆ ಹಕ್ಕೊತ್ತಾಯ, ಕೆಲ ಪ್ರತಿಭಟನೆ, ಒಂದಷ್ಟು ಬೇಡಿಕೆ, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ 2022ರ ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಲು ತಿದ್ದುಪಡಿ ತರಬೇಕು ಎಂಬ ಅವೈಜ್ಞಾನಿಕ ಬೇಡಿಕೆಯೊಂದಿಗೆ ಸಮ್ಮೇಳನ ಸಂಪನ್ನಗೊಂಡಿತು. ಹಳೆಯ ನಿರ್ಣಯಗಳಂತೆ ಹಳೆಯ ತಕರಾರುಗಳೂ, ಸಮಸ್ಯೆಗಳೂ ಯಥಾವತ್ತು 88ನೇ ಸಮ್ಮೇಳನದ ಕಡತಕ್ಕೆ ವರ್ಗಾವಣೆಗೊಂಡವು.

ಐದು ಪಾಯಿಂಟರ್‌

- ಬೆಂಗಳೂರು ಮತ್ತು ಮೈಸೂರು ಸಮೀಪದಲ್ಲಿದ್ದರೂ, ಸಾಹಿತಿಗಳ ಭಾಗವಹಿಸುವಿಕೆ ತೀರಾ ಕಡಿಮೆ ಇತ್ತು. ಗೋಷ್ಠಿಯಲ್ಲಿ ಭಾಗಿಯಾದವರನ್ನು ಬಿಟ್ಟರೆ ಕೇವಲ ಬೆರಳೆಣಿಕೆಯ ಲೇಖಕರು ಅಲ್ಲಲ್ಲಿ ಆಗೀಗ ಕಾಣಿಸಿಕೊಂಡಿದ್ದರು.

- ಕಸಾಪ ಅಧ್ಯಕ್ಷರನ್ನು ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ 2022ರ ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಲು ತಿದ್ದುಪಡಿ ತರಬೇಕೆಂಬ ಅವೈಜ್ಞಾನಿಕ ಬೇಡಿಕೆಯೊಂದಿಗೆ ಸಮ್ಮೇಳನ ಸಂಪನ್ನ

- ಪುಸ್ತಕ ಮಳಿಗೆಗಳಿಗೆ ಮಂದಿ ಸಂಖ್ಯೋಪಸಂಖ್ಯೆಯಲ್ಲಿ ನುಗ್ಗಿದರೂ, ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಕುದುರಲಿಲ್ಲ. ಜೇಬಲ್ಲಿ ದುಡ್ಡಿಲ್ಲ, ಇಂಟರ್‌ನೆಟ್ ಸಿಕ್ಕಲ್ಲ ಅನ್ನುವ ಸ್ಥಿತಿಯಲ್ಲಿ ಮರಳಿದ ಪುಸ್ತಕ ಆಸಕ್ತರು

- ಈ ಸಲದ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು ಮಂಡ್ಯ, ಮದ್ದೂರು, ರಾಮನಗರ, ಮೈಸೂರು, ಶ್ರೀರಂಗಪಟ್ಟಣ ಮತ್ತು ಆಸುಪಾಸಿನ ಹಳ್ಳಿಗಳ ರೈತಾಪಿ ಮಂದಿ ಮತ್ತು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ''ಪುಸ್ತಕ ದರ್ಶನ'' ಮಾಡಿದ ವಿದ್ಯಾರ್ಥಿಗಳು

- ಸಮ್ಮೇಳನದ ಅಧ್ಯಕ್ಷರಾದ ಗೊರುಚ ತಮ್ಮ ಭಾಷಣದ ಉದ್ದಕ್ಕೂ ಮುಖ್ಯಮಂತ್ರಿಗಳನ್ನು ಓಲೈಸುವುದರಲ್ಲೇ ತೊಡಗಿದ್ದರು ಎಂಬ ವ್ಯಾಪಕವಾದ ಟೀಕೆ ಕೇಳಿಬಂತು.

Share this article