ಕನ್ನಡಪ್ರಭ ವಾರ್ತೆ ಮಣಿಪಾಲ
ಓರ್ವ ಮೂಳೆತಜ್ಞನಾಗಿ ಅನೇಕ ಮಕ್ಕಳು ಪೋಲಿಯೊದಿಂದ ಸಂಕಟಪಡುತ್ತಿರುವುದನ್ನು ನೋಡಿದ್ದೇನೆ, ಅವರು ಬದುಕಿನುದ್ದಕ್ಕೂ ಅಂಗವಿಕಲತೆಗೆ ಒಳಗಾಗಿ ಒದ್ದಾಡುತ್ತಿರುವುದನ್ನೂ ಗಮನಿಸಿದ್ದೇನೆ. ಆದರೆ ಇಂದು ನಮ್ಮ ದೇಶದಲ್ಲಿ ಪೋಲಿಯೊ ನಿರ್ಮೂಲನವಾಗಿದೆ. ವಿಶ್ವದಲ್ಲಿ ಶೇ.99.99 ಪೋಲಿಯೊ ನಿವಾರಣೆಯಾಗಿದೆ. ರೋಟರಿಯಂತಹ ಸಾರ್ವಜನಿಕ ಸಂಘಟನೆಗಳ ಜಾಗೃತಿಯಿಂದಾಗಿ ಇಂತಹ ಅದ್ವಿತೀಯ ಸಾಧನೆ ಸಾಧ್ಯವಾಗಿದೆ ಎಂದು ಮಾಹೆಯ ಸಹಉಪಕುಲಪತಿ ಡಾ.ಶರತ್ ರಾವ್ ಹೇಳಿದರು.ಅವರು ರೋಟರಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್, ರೋಟರ್‍ಯಾಕ್ಟ್ ಕ್ಲಬ್ ಉಡುಪಿ ಮತ್ತು ಕೆಎಂಸಿ ಮಣಿಪಾಲ ಜಂಟಿಯಾಗಿ ವಿಶ್ವ ಪೋಲಿಯೊ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಾಕಥಾನ್ - ಪೋಲಿಯೊ ಕೊನೆಗೆ ಕಾಲ್ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಬಾಸ್ರಿ ರಚಿಸಿದ ‘ಎಂಡ್ ಪೋಲಿಯೋ ನೌ’ ಎಂಬ ಮಾಹಿತಿ ಪುಸ್ತಿಕೆಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಬಿಡುಗಡೆಗೊಳಿಸಿದರು.ಇದಕ್ಕೆ ಮೊದಲು ವಾಕಥಾನ್, ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರಿದ ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ, ಈ ವರ್ಷದ ರೋಟರಿಯು ‘ಪೋಲಿಯೋ ಕೊನೆಗಾಣಿಸೋಣ: ಪ್ರತೀ ಮಗು, ಪ್ರತೀ ಲಸಿಕೆ, ಪ್ರತೀಯೊಂದು ಸ್ಥಳಗಳಲ್ಲಿ’ ಎಂಬ ಘೋಷಣೆಯೊಂದಿಗೆ ವಿಶ್ವ ಪೋಲಿಯೊ ದಿನವನ್ನು ಆಚರಿಸುತ್ತಿದ್ದು ಶಾಶ್ವತವಾಗಿ ಪೋಲಿಯೊ ನಿವಾರಣೆಗೆ ರೋಟರಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲು ಕರೆನೀಡಿದರು.
ಜಿಲ್ಲಾ ಪೋಲಿಯೊ ಪ್ಲಸ್ ಸಭಾಪತಿ ಸುಬ್ರಹ್ಮಣ್ಯ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಅಮಿತ್ ಅರವಿಂದ್, ಜಿಲ್ಲಾ ರೋಟರಿ ಪಬ್ಲಿಕ್ ಇಮೇಜ್ ಉಪ ಸಭಾಪತಿ ರೇಖಾ ಉಪಾಧ್ಯಾಯ, ವಲಯ ಪೋಲಿಯೋ ಪ್ಲಸ್ ಸಂಯೋಜಕ ಡಾ ಪ್ರಭಾಕರ ರೆಂಜಾಳ್ ಉಪಸ್ಥಿತರಿದ್ದರು.ಮಣಿಪಾಲದ ಅಧ್ಯಕ್ಷ ದೀಪಕ್ ರಾಮ್ ಬಾಯರಿ ಸ್ವಾಗತಿಸಿದರು. ರೋಟರಿ ಉಡುಪಿ ಅಧ್ಯಕ್ಷ ಸೂರಜ್ ಕುಮಾರ್ ವೈ. ವಂದಿಸಿದರು, ವಲಯ ಸೇನಾನಿ ಡಾ. ಶ್ರೀಧರ್ ಕಾರ್ಯಕ್ರಮ ನಿರ್ವಹಿಸಿದರು. ನಿತ್ಯಾನಂದ ನಾಯಕ್ ವಾಕಥಾನ್ ನಿರ್ವಹಣೆ ನಡೆಸಿಕೊಟ್ಟರು.