ಕತ್ತಲಲ್ಲಿ ಗದಗ ಬೆಟಗೇರಿ ಅವಳಿ ನಗರದ ಹಲವು ಬಡಾವಣೆ!

KannadaprabhaNewsNetwork |  
Published : Apr 18, 2026, 02:15 AM IST
(ಎಲ್ಇಡಿ ಬಲ್ಬ್)(ಬೀದಿ ದೀಪದ ಪೋಟೋ) | Kannada Prabha

ಸಾರಾಂಶ

ರಾಜ್ಯದಲ್ಲಿ ಬೀದಿದೀಪಗಳಿಗಾಗಿ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು(ಸಿಸಿಎಂಎಸ್) (Centralized Control and Monitoring Systems) 2019ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಹಳೆಯ ಸಾಂಪ್ರದಾಯಿಕ ಬೀದಿದೀಪಗಳ ಬದಲಿಗೆ ಡಿಜಿಟಲ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್ ಎಲ್ಇಡಿ ದೀಪ ಅಳವಡಿಸುವ ಪ್ರಕ್ರಿಯೆಯಾಗಿದೆ. ಅವಳಿ ನಗರದಲ್ಲಿ ಈ ಯೋಜನೆ ಜಾರಿಯಾಗುತ್ತದೆ ಎಂದು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ- ಬೆಟಗೇರಿ ನಗರಸಭೆಯ ಅಧಿಕಾರಿಗಳು ಮತ್ತು ಅಧಿಕಾರ ನಡೆಸಿರುವ ಆಡಳಿತ ಮಂಡಳಿಗಳು ಅವಳಿ ನಗರದ ಜನತೆಯ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯ ಹೊಂದಿದ್ದಾರೆ ಎಂದರೆ, ಬೀದಿದೀಪಗಳ ನಿರ್ವಹಣೆ ಮತ್ತು ಅಳವಡಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇದರಿಂದ ಹಲವಾರು ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕತ್ತಲು ಸಾಮಾನ್ಯವಾಗಿದೆ.

ರಾಜ್ಯದಲ್ಲಿ ಬೀದಿದೀಪಗಳಿಗಾಗಿ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು(ಸಿಸಿಎಂಎಸ್) (Centralized Control and Monitoring Systems) 2019ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಹಳೆಯ ಸಾಂಪ್ರದಾಯಿಕ ಬೀದಿದೀಪಗಳ ಬದಲಿಗೆ ಡಿಜಿಟಲ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್ ಎಲ್ಇಡಿ ದೀಪ ಅಳವಡಿಸುವ ಪ್ರಕ್ರಿಯೆಯಾಗಿದೆ. ಅವಳಿ ನಗರದಲ್ಲಿ ಈ ಯೋಜನೆ ಜಾರಿಯಾಗುತ್ತದೆ ಎಂದು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ.

ಏನೆಲ್ಲಾ ಒಳಗೊಂಡಿದೆ?: ಈ ವ್ಯವಸ್ಥೆಯು ಹಬ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಪ್ರತಿ ಎಲ್ಇಡಿ ದೀಪಗಳನ್ನು ಟ್ಯಾಗ್ ಮಾಡಲಾಗಿರುತ್ತದೆ ಮತ್ತು ಅವುಗಳನ್ನು ಸ್ಮಾರ್ಟ್ ಮೀಟರ್ ಹಾಗೂ ಕಂಟ್ರೋಲರ್ ಹಾಕಿ, ಹಳೆಯ ಬೀದಿದೀಪಗಳನ್ನು ತೆಗೆದು 3- ಪಿನ್ ಸಂಪರ್ಕ (ಫೇಸ್, ನ್ಯೂಟ್ರಲ್ ಮತ್ತು ಅರ್ಥ್) ಹೊಂದಿರುವ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಇವುಗಳನ್ನು ನೇರವಾಗಿ ಸಿಸಿಎಂಎಸ್ ಪ್ಯಾನಲ್‌ಗೆ ಜೋಡಿಸಲಾಗುತ್ತದೆ. ಹೀಗೆ ಅಳವಡಿಕೆಯಾದ ನಂತರ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಅನುಗುಣವಾಗಿ ಅಥವಾ ನಿಗದಿಪಡಿಸಿದ ವೇಳಾಪಟ್ಟಿಯಂತೆ ಈ ದೀಪಗಳು ಸ್ವಯಂಚಾಲಿತವಾಗಿ ಆನ್ ಮತ್ತು ಆಫ್ ಆಗುತ್ತವೆ. ಅಲ್ಲದೆ, ವಿದ್ಯುತ್ ಉಳಿಸಲು ಇವುಗಳಲ್ಲಿ ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡುವ (ಡಿಮ್ಮಿಂಗ್) ವ್ಯವಸ್ಥೆಯೂ ಇದೆ.

ಈ ಸಂಪರ್ಕ ವ್ಯವಸ್ಥೆಯು ಎಲ್ಇಡಿ ಬೀದಿದೀಪಗಳು, ಸಿಸಿಎಂಎಸ್ ಕಂಟ್ರೋಲರ್, ಪ್ಯಾನಲ್, ಸರ್ವಿಸ್ ವೈರ್‌ಗಳು, ಎಂಸಿಬಿ ಮತ್ತು ಸರ್ಜ್ ಪ್ರೊಟೆಕ್ಷನ್ ಸಾಧನಗಳನ್ನು ಒಳಗೊಂಡಿದ್ದು, ಮುನ್ಸಿಪಲ್ ಎಂಜಿನಿಯರ್‌ಗಳು ಮೊಬೈಲ್ ಆ್ಯಪ್ ಅಥವಾ ಡ್ಯಾಶ್‌ಬೋರ್ಡ್ ಮೂಲಕ ವಿದ್ಯುತ್ ಬಳಕೆಯನ್ನು ಮೇಲ್ವಿಚಾರಣೆ ಮಾಡಬಹುದು. ವಿದ್ಯುತ್ ಕಳ್ಳತನವನ್ನು ಪತ್ತೆಹಚ್ಚಬಹುದು ಮತ್ತು ದೂರದಿಂದಲೇ ದೀಪಗಳನ್ನು ನಿಯಂತ್ರಿಸಬಹುದಾದ ಮಹತ್ವದ ಯೋಜನೆ ಇದಾಗಿದೆ.

ನಿರ್ವಹಣೆ ಹೇಗೆ?: ಈ ಯೋಜನೆ ಸಾಮಾನ್ಯವಾಗಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಡೆಯುತ್ತದೆ. ಇದನ್ನು ಮುಖ್ಯವಾಗಿ (ನಿರ್ಮಾಣ, ಹಣಕಾಸು ಒದಗಿಸುವಿಕೆ, ನಿರ್ವಹಣೆ ಮತ್ತು ಹಸ್ತಾಂತರ) ಆಧಾರದ ಮೇಲೆ ಮಾಡಲಾಗುತ್ತದೆ. ಯೋಜನೆಯ ವೆಚ್ಚವನ್ನು ಉಳಿತಾಯವಾದ ವಿದ್ಯುತ್ ಬಿಲ್ ಮೂಲಕ ಭರಿಸಬೇಕು. ಗುತ್ತಿಗೆದಾರರು ನಿಗದಿತ ಅವಧಿಯವರೆಗೆ (ಉದಾಹರಣೆಗೆ 5- 10 ವರ್ಷಗಳು) ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಟೆಂಡರ್ ಕರೆದಿಲ್ಲ: 2019ರಲ್ಲಿಯೇ ಅವಳಿ ನಗರದ ಎಲ್ಲ ಬೀದಿದೀಪಗಳನ್ನು ಬದಲಿಸಿ ಎಲ್ಇಡಿ ಬಲ್ಬ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಆದರೆ ಇದುವರೆಗೂ ಎಲ್ಇಡಿ ಬಲ್ಬಗಳ ಅಳವಡಿಕೆಯಾಗಿಲ್ಲ. ಅದಕ್ಕಾಗಿ ಟೆಂಡರ್ ಕರೆದಿಲ್ಲ, ಇರುವ ಹಳೆಯ ಟ್ಯೂಬ್ ಲೈಟ್ ಗಳನ್ನು ಕೂಡಾ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೊಸ ಟ್ಯೂಬ್ ಲೈಟ್ ಗಳನ್ನು ಹಾಕುತ್ತಿಲ್ಲ. ಒಟ್ಟಿನಲ್ಲಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅವಳಿ ನಗರದ ಜನರು ಬಲಿಯಾಗುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.

ಬೀದಿದೀಪಗಳ ಅಳವಡಿಕೆ: ಸಿಸಿಎಂಎಸ್ ಯೋಜನೆಯಡಿ ಎಲ್ಇಡಿ ಬಲ್ಬ್ ಅಳವಡಿಕೆಯ ಕಾರ್ಯದ ಸಮೀಕ್ಷೆ ನಡೆಯುತ್ತಿದೆ. ಈಗಾಗಲೇ ಇರುವ ಬೀದಿದೀಪಗಳ ನಿರ್ವಹಣೆ ಮಾಡಲಾಗುತ್ತಿದೆ. ಅಗತ್ಯವಿರುವೆಡೆ ಹೊಸ ಬೀದಿದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಭಿಯಂತರರಾದ ಲಕ್ಷ್ಮಣ ಎಂ.ಜೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಚ್ಚುವರಿ ಡಯಾಲಿಸಿಸ್ ಘಟಕ ಆರಂಭಿಸುವಂತೆ ಆಗ್ರಹ
ನರಗುಂದ ತಾಲೂಕಿನಲ್ಲಿ ಬಾರದ ಖಾಲಿ ಚೀಲ: ಕಡಲೆ ಖರೀದಿ ಕೇಂದ್ರಗಳೇ ಬಂದ್!