ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ನಿರಂತರ ಪ್ರಯತ್ನದ ಫಲವಾಗಿ ಈಗಾಗಲೇ ನೂರಾರು ಕುಟುಂಬಗಳು ಗುಂಪು ಮನೆಗಳಲ್ಲಿ ವಾಸಿಸುತ್ತಿವೆ. ಇನ್ನೂ ಹಲವು ಮನೆಗಳು ಫಲಾನುಭವಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿವೆ. ದೊಡ್ಡ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಚಿವರು ವಿಶೇಷವಾಗಿ ₹11 ಕೋಟಿ ಅನುದಾನ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರದೇಶವು ರಾಜ್ಯದಲ್ಲೇ ಮಾದರಿ ಬಡಾವಣೆಯಾಗಿ ರೂಪುಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರದ ವಸತಿ ಯೋಜನೆಯಡಿ ಮನೆ ಮಂಜೂರಾದ ಬಳಿಕವೂ ಮನೆ ಬಳಕೆಗೆ ಮುಂದಾಗದ ಫಲಾನುಭವಿಗಳ ಕುರಿತು ಸಮಗ್ರ ಮಾಹಿತಿ ಪಡೆದು, ಅವರಿಗೆ ನೋಟಿಸ್ ಜಾರಿಗೊಳಿಸಿ ನಿಗದಿತ ಅವಧಿಯೊಳಗೆ ಮನೆಗೆ ವಾಸಕ್ಕೆ ಬಾರದಿದ್ದಲ್ಲಿ ಅಂತಹ ಮನೆಗಳನ್ನು ಅರ್ಹ ವಸತಿ ರಹಿತರಿಗೆ ಮರುಹಂಚಿಕೆ ಮಾಡುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸುಬ್ರಹ್ಮಣ್ಯ ಬೆಟ್ಟದ ಸಮೀಪ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಿರ್ಮಿಸಿರುವ ಗುಂಪು ಮನೆಗಳ ಎರಡನೇ ಹಂತದ ಫಲಾನುಭವಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ನೀಡಿದರೂ ಕೆಲ ಫಲಾನುಭವಿಗಳು ಮನೆಗಳಲ್ಲಿ ವಾಸಿಸಲು ಮುಂದಾಗದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆಯ ಮೊದಲ ಹಂತದಲ್ಲಿ ಮನೆ ಪಡೆದಿರುವ ನೂರಕ್ಕೂ ಅಧಿಕ ಫಲಾನುಭವಿಗಳು ಇನ್ನೂ ತಮ್ಮ ಮನೆಗಳಿಗೆ ಸ್ಥಳಾಂತರಗೊಂಡಿಲ್ಲ. ಮತ್ತೊಂದೆಡೆ ಸ್ವಂತ ಮನೆ ಇಲ್ಲದ ನೂರಾರು ಕುಟುಂಬಗಳು ಮನೆ ಮಂಜೂರು ಮಾಡುವಂತೆ ಪ್ರತಿನಿತ್ಯ ಮನವಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ಮನೆ ಪಡೆದಿರುವವರು ವಾಸಕ್ಕೆ ಬರುವ ಆಸಕ್ತಿ ಹೊಂದಿಲ್ಲದಿದ್ದರೆ ತಮ್ಮ ಹಕ್ಕುಪತ್ರವನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಬೇಕು. ಇದರಿಂದ ನಿಜವಾಗಿಯೂ ಮನೆ ಅಗತ್ಯವಿರುವವರಿಗೆ ಆ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.
ಈ ಕುರಿತು ನಗರಸಭೆ ಪೌರಾಯುಕ್ತರು ಬಿಲ್ ಕಲೆಕ್ಟರ್‌ಗಳ ಮೂಲಕ ಫಲಾನುಭವಿಗಳ ಮನೆಗಳಿಗೆ ಖುದ್ದು ಭೇಟಿ ನೀಡಿ, ಅವರು ಮನೆಗೆ ವಾಸಕ್ಕೆ ಬಾರದಿರುವ ಕಾರಣ ಹಾಗೂ ಮುಂದಿನ ನಿರ್ಧಾರದ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿ, ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ನಿರಂತರ ಪ್ರಯತ್ನದ ಫಲವಾಗಿ ಈಗಾಗಲೇ ನೂರಾರು ಕುಟುಂಬಗಳು ಗುಂಪು ಮನೆಗಳಲ್ಲಿ ವಾಸಿಸುತ್ತಿವೆ. ಇನ್ನೂ ಹಲವು ಮನೆಗಳು ಫಲಾನುಭವಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿವೆ. ದೊಡ್ಡ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಚಿವರು ವಿಶೇಷವಾಗಿ ₹11 ಕೋಟಿ ಅನುದಾನ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರದೇಶವು ರಾಜ್ಯದಲ್ಲೇ ಮಾದರಿ ಬಡಾವಣೆಯಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಎರಡನೇ ಹಂತದ ಫಲಾನುಭವಿಗಳ ಆಯ್ಕೆಯನ್ನೂ ಮೊದಲ ಹಂತದಂತೆ ಲಾಟರಿ ಮೂಲಕ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಮಾಜಿ ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಆಶ್ರಯ ಸಮಿತಿ ಸದಸ್ಯರಾದ ಶ್ರೀನಿವಾಸ್, ಅಣ್ಣಾದೊರೆ, ಅಮ್ಜದ್ ಪಾಷಾ, ನಗರಸಭೆ ನಿಕಟಪೂರ್ವ ಸದಸ್ಯರಾದ ವೆಂಕಟಮುನಿ, ದರ್ಶನ್ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.