ವಿದ್ಯಾರ್ಥಿಗಳಿಗೆ ಡಿಡಿ ಚಂದನ ಸಹಾಯಕ ನಿರ್ದೇಶಕಿ ಕೆ. ಟಿ. ಮೇಘನಾ ಕರೆ
ಪರೀಕ್ಷೆ ಎಂಬ ಭಯವನ್ನು ಮನಸ್ಸಿನಿಂದ ಹೋಗಲಾಡಿಸಬೇಕು. ಒಂದು ಸಣ್ಣ ಯಶಸ್ಸು ಕೂಡ ತುಂಬಾ ಶ್ರಮ ಬಯಸುತ್ತದೆ ಎಂದು ಬೆಂಗಳೂರು ಡಿಡಿ ಚಂದನ ಸಹಾಯಕ ನಿರ್ದೇಶಕಿ ಕೆ. ಟಿ. ಮೇಘನಾ ತಿಳಿಸಿದರು.
ಪಟ್ಟಣದ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬರಿಗಾಲಿನಲ್ಲಿ ಬೆಟ್ಟವನ್ನು ಹತ್ತುವಾಗ ಕಲ್ಲು ಮುಳ್ಳು ಚುಚ್ಚುತ್ತವೆ. ಆದರೂ ಬೆಟ್ಟಹತ್ತಿ ಸೂರ್ಯೋದಯವನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಶ್ರಮಪಟ್ಟು ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಅಂದುಕೊಂಡ ಕೋರ್ಸ್ ನಲ್ಲಿ ಸೀಟು ಸಿಕ್ಕರೆ ತುಂಬಾ ಖುಷಿಯಾಗುತ್ತದೆ. ನನಗೆ ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಶ್ರಮಪಟ್ಟು ವ್ಯಾಸಂಗ ಮಾಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದರು.ಅಬ್ದುಲ್ ಕಲಾಂ ಅವರು ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದರು. ಅದಕ್ಕಾಗಿ ಡೆಹರಡೂನ್ ನಲ್ಲಿ ಏರ್‌ಫೋರ್ಸ್ ಪರೀಕ್ಷೆಗೆ ಹೋಗುತ್ತಾರೆ. 8 ಹುದ್ದೆಗೆ 25 ಜನ ಬಂದಿರುತ್ತಾರೆ. ಕಲಾಂ ಅವರು 9ನೇ ಸ್ಥಾನದಲ್ಲಿರುತ್ತಾರೆ. ಇದರಿಂದ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ಅವರು ಪೈಲೆಟ್ ಆಗದಿರಬಹುದು. ಆದರೆ ಹಲವು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹಾಗಾಗಿ ಒಂದು ಬಾಗಿಲು ಮುಚ್ಚಿದರೆ, ಹಲವು ಬಾಗಿಲು ತೆರೆದುಕೊಳ್ಳುತ್ತವೆ. ಹಾಗಾಗಿ ಪ್ರಸ್ತುತ ಪರೀಕ್ಷೆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ವಿದ್ಯಾರ್ಥಿಗಳು ಓದಿದ್ದನ್ನು ಮನನ ಮಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಶ್ರೀ ಅದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ - ಕೊಡಗು ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮೆಟ್ಟಿಲೆರಲು ಸಾಧ್ಯ. ಹಾಗಾಗಿ ಮೇಘನಾ ಅವರು ಯಾರೋ ಕಟ್ಟಿದ ಗೋಪುರಕ್ಕೆ ಕಳಸವಾಗಿಲ್ಲ. ಅವರೇ ಕಟ್ಟಿದ ಗೋಪುರಕ್ಕೆ ಕಳಸವಾಗಿದ್ದಾರೆ. ಹಾಗಾಗಿ ಪರೀಕ್ಷೆಗೆ ಭಯ, ಆತಂಕ ಬೇಡ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಮುಂದೆ ಸಾಕಷ್ಟು ಸವಾಲುಗಳು ಬಂದರೂ ದೈರ್ಯವಾಗಿ ಎದುರಿಸಬೇಕು ಎಂದು ಹೇಳಿದರು.