ಧಾರವಾಡ: ಉಸ್ತುವಾರಿ ಸಚಿವ ಸಂತೋಷ ಲಾಡ್ ಶನಿವಾರ ಚಿಗರಿ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯದ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿನ ಅಡಚಣೆಗಳನ್ನು ಖುದ್ದಾಗಿ ಪರಿಶೀಲಿಸಿದರು.
ಹೊಸೂರ ಸರ್ಕಲ್, ಉಣಕಲ್ ಮತ್ತು ನವಲೂರ ಬಳಿಯ ಸೇತುವೆಗಳ ಗುಣಮಟ್ಟ, ಮಿಶ್ರವಾಹನ ಸಂಚಾರದಲ್ಲಿ ಆಗುತ್ತಿರುವ ತೊಂದರೆಗಳು, ಶೌಚಾಲಯ, ಕುಡಿಯುವ ನೀರು ಒದಗಿಸುವ ಸಾಧ್ಯತೆಗಳು, ಬಿಆರ್‌ಟಿಎಸ್ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರು ಅರಿಯುವ ಯತ್ನ ಮಾಡಿದರು.
ಬಿಆರ್‌ಟಿಎಸ್, ಪೊಲೀಸ್ ಮತ್ತು ಕೆಆರ್‌ಡಿಸಿಎಲ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸುವ ದಿಸೆಯಲ್ಲಿ ಸಭೆ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಈಗಿರುವ ಪರಿಸ್ಥಿತಿಯಲ್ಲಿ ಅವಳಿ ನಗರದ ಮಧ್ಯೆ ಸಂಚರಿಸುವ ಖಾಸಗಿ ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಮಗ್ರ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮುಂಬರುವ ದಿನಗಳಲ್ಲಿ ಬಿಆರ್‌ಟಿಎಸ್ ಮಾರ್ಗದಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಓ ಭುವನೇಶ ಪಾಟೀಲ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ, ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಪದಾಧಿಕಾರಿಗಳಾದ ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ವೆಂಕಟೇಶ ರಾಯ್ಕರ್, ಪುಂಡಲೀಕ ಹಡಪದ ಮತ್ತಿತರರು ಇದ್ದರು.