ಗದಗ: ಬಿಜೆಪಿಗೆ ಕಾರ್ಯಕರ್ತರೇ ಜೀವಾಳ ಎನ್ನುತ್ತಾರೆ. ಆದರೆ, ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕರ್ತರನ್ನು ನಿಂದಿಸುವುದು ಮತ್ತು ಸ್ವಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಮುಖಂಡ ಮಂಜುನಾಥ ಮಾಗಡಿ ಒತ್ತಾಯಿಸಿದರು.
ಬಿಜೆಪಿ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ಕಳೆದ ವರ್ಷ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಾಲಕನ ಶವಸಂಸ್ಕಾರಕ್ಕೆ ಶಾಸಕರು ಹೋಗಲಿಲ್ಲ. ಅಲ್ಲದೇ ಸುನೀಲನ ತಂದೆ- ತಾಯಿಗಳನ್ನು ಕೂಡಿ ಹಾಕಿ ಹಿಂಸೆ ನೀಡುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಲಕ್ಷ್ಮೇಶ್ವರದಲ್ಲಿ 18 ದಿನಗಳ ಕಾಲ ರೈತರು ಹೋರಾಟ ಮಾಡಿದ್ದರು. ಹೋರಾಟಕ್ಕೆ ವಿವಿಧ ಮಠಗಳ ಮಠಾಧೀಶರು, ಹಲವು ಶಾಸಕರು, ಸಂಸದರು ಬೆಂಬಲ ನೀಡಿದ್ದರು. ಆದರೆ, ಸ್ಥಳೀಯವಾಗಿ ಇದ್ದ ಶಾಸಕ ಡಾ. ಚಂದ್ರು ಲಮಾಣಿ ಒಂದು ದಿನ ಕೂಡ ರೈತರಿಗೆ ಬೆಂಬಲ ನೀಡಲಿಲ್ಲ. ಇಂತಹ ಶಾಸಕರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ರಾಜ್ಯಾಧ್ಯಕ್ಷರಿಗೆ, ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ, ಚಂದ್ರು ಮಾಗಡಿ, ಶಿವಾನಂದ ಬನ್ನಿಮಟ್ಟಿ, ಮುತ್ತು ನೀರಲಗಿ, ಬಸವರಾಜ ಜಾಲಗಾರ, ಮಂಜುನಾಥ ದೊಡ್ಡಗೌಡ್ರ, ಮಂಜನಗೌಡ ನರಸಮ್ಮನವರ, ಪರಶುರಾಮ ಚಹ್ವಾಣ, ಹೊನ್ನಪ್ಪ ವಡ್ಡರ ಇದ್ದರು.