)
ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಸಕರ ಮಧ್ಯಪ್ರವೇಶದಿಂದ ಅಧಿಕಾರಿಗಳು ಪರಿಹಾರ ಕಂಡುಕೊಂಡಿದ್ದಾರೆ.
ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗಿದ್ದ ಕಾನೂನಾತ್ಮಕ ಸಮಸ್ಯೆಗಳಿಗೆ ಉಪ ಜಿಲ್ಲಾಧಿಕಾರಿ ಮೀನಾಕ್ಷಿ ಆರ್ಯ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಅವರು ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮಧ್ಯಾಹ್ನ 1.30ರ ಬಳಿಕ ಪುರಸಭೆಯ ಕುಡಿಯುವ ನೀರಿನ ಪೂರೈಕೆ ಆರಂಭವಾಗಿದೆ.ಫೆ. 13ರಂದು ಬೆಳಗ್ಗೆ ಪುರಸಭೆ ಕಚೇರಿ ಮುಂದೆ ಜಮಾಯಿಸಿದ ನಾಗರಿಕರು ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು.ಪುರಸಭೆಯ ಸಿಬ್ಬಂದಿಗಳನ್ನು ಅನಧಿಕೃತವಾಗಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿ ಹೊಸದಾಗಿ ಬಂದ ಮುಖ್ಯಾಧಿಕಾರಿ ಸಿಬ್ಬಂದಿಗಳನ್ನು ತೆಗೆದುಹಾಕಿದ್ದಾರೆ ಮತ್ತು ಕನಿಷ್ಠ ವೇತನ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ, ಹೀಗಾಗಿ ಕಳೆದ ಹಲವು ಸಮಯಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ರೊಚ್ಚಿಗೆದ್ದ ನಾಗರಿಕರು ಕಚೇರಿಗೆ ಬೀಗ ಜಡಿದಿದ್ದರು.
ತಹಸೀಲ್ದಾರ್ ಆಗಮಿಸಿದ ವೇಳೆ ಪ್ರತಿಭಟನಾಕಾರರು ಮಂಜುನಾಥ್ ಅವರನ್ನು ಸುತ್ತವರಿದಿದ್ದು, ಅವರಲ್ಲಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಹಾಗೂ ಎಂಜಿನಿಯರ್ ಡಿಮೆಲ್ಲೊ ಅವರನ್ನು ತಹಸೀಲ್ದಾರ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಪ್ರತಿಭಟನೆ ಸಂದರ್ಭ ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಮುಖಂಡರು ಗಂಟೆಗಳ ಕಾಲ ಕಬೇರಿಯಲ್ಲಿ ತಹಸೀಲ್ದಾರ್ ಅವರ ಜೊತೆ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಹಾರ ವ್ಯವಸ್ಥೆ ಕೈಗೊಂಡಿದ್ದಾರೆ.