ಶಾಸಕ ವಿನಯ ಕುಲಕರ್ಣಿಗೆ ಕೊರಗಜ್ಜ ದೈವ ಅಭಯ

KannadaprabhaNewsNetwork |  
Published : Jul 28, 2024, 02:05 AM IST
ಕೊರಗಜ್ಜನ ಕೋಲ ಸೇವೆಯಲ್ಲಿ ಭಾಗಿಯಾದ ವಿನಯ್ ಕುಲಕರ್ಣಿ. | Kannada Prabha

ಸಾರಾಂಶ

ಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಮುಂದೆ ಸಂತೋಷದಿಂದ ಕ್ಷೇತ್ರಕ್ಕೆ ಬಂದು ಕೋಲ ಸೇವೆ ನೀಡುವಂತೆ ದೈವ ನುಡಿದಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕೊರಗಜ್ಜನಿಗೆ ಸೇವೆ ನೀಡಿ ದೈವದ ಬಳಿ ಸಂಕಷ್ಟ ಹೇಳಿಕೊಂಡ ಶಾಸಕ ವಿನಯ ಕುಲಕರ್ಣಿಗೆ, ೪೮ ದಿನಗಳ ಒಳಗೆ ಕ್ಷೇತ್ರ ನಿರ್ಬಂಧ ಸಮಸ್ಯೆ ಬಗೆಹರಿಸುವ ಬಗ್ಗೆ ದೈವ ಅಭಯ ನೀಡಿದೆ.ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಬಗ್ಗೆ ಪ್ರಸ್ತಾಪಿಸಿದ ಶಾಸಕ ಕುಲಕರ್ಣಿ, ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆಯೂ ದೈವದಲ್ಲಿ ಹೇಳಿಕೊಂಡಿದ್ದಾರೆ.

ಸಂಕಷ್ಟವನ್ನು ನಿವಾರಿಸುವ ಬಗ್ಗೆ ಕೊರಗಜ್ಜ ದೈವ ಅಭಯ ನೀಡಿದ್ದು, ತಪ್ಪು ಮಾಡೋದು ಸಹಜ ಆದರೆ ಅದನ್ನು ತಿದ್ದಿಕೊಂಡು ಮುಂದುವರಿಯುವುದು ಉತ್ತಮ ಗುಣ. ಇನ್ನೂ ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿ ಇರುವಂತೆ ಸೂಚನೆ ನೀಡಿದ್ದು, ಹೆಣ್ಣಿನ ಕಾರಣದಿಂದಲೇ ಈ ಎಲ್ಲ ಸಂಕಷ್ಟ ಎದುರಾಗಿದೆ. ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಮುಂದೆ ಸಂತೋಷದಿಂದ ಕ್ಷೇತ್ರಕ್ಕೆ ಬಂದು ಕೋಲ ಸೇವೆ ನೀಡುವಂತೆ ದೈವ ನುಡಿದಿದೆ.ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿಯಿಂದ ಸಂಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆಯು ಶನಿವಾರದಂದು ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ನಾಯಕರು ಹಾಗೂ ಮಂಗಳೂರಿನ ನನ್ನ ಸ್ನೇಹಿತರು ಕೋಲ ಸೇವೆ ಕೊಡುವ ಬಗ್ಗೆ ಹೇಳಿದ್ದರು. ಈಗ ಸಂದರ್ಭ ಕೂಡಿ ಬಂದ ಹಿನ್ನೆಲೆ ಕೋಲ ಸೇವೆ ಕೊಟ್ಟಿದ್ದೇನೆ. ಕುಟುಂಬ ಸಮೇತರಾಗಿ ಬಂದು ಕೋಲ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದರು.

ಕೋಲದಲ್ಲಿ ಶಾಸಕ ಕುಲಕರ್ಣಿ ಮತ್ತು ಕುಟುಂಬಸ್ಥರು, ರಾಜೀವ್ ಗಾಂಧಿ ರಾಜ್ಯ ಅಲೈಡ್ ಎಂಡ್ ಹೆಲ್ತ್ ಕೇರ್ ಕೌನ್ಸಿಲ್ ಸದಸ್ಯ ಇಫ್ತಿಕಾರ್ ಆಲಿ ಭಾಗಿಯಾಗಿದ್ದರು.

ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿಯಾಗಿದ್ದು ಈ ಸಂಬಂಧ ಸಿಬಿಐ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಇದೇ ವಿಚಾರದಲ್ಲಿ ಕೋರ್ಟ್ ವಿಚಾರಣೆಯಿದ್ದು ಈ ಎಲ್ಲಾ ಬೆಳವಣಿಗೆಗಳ ನಡುವೆ ಕೋಲ ಸೇವೆಯನ್ನು ವಿನಯ್ ಕುಲಕರ್ಣಿ‌ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.‌

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ