ನಿಸ್ವಾರ್ಥ ಪ್ರೀತಿಯ ದೈವೀರೂಪವೇ ತಾಯಿ: ಸ್ವಾಮೀಜಿ

KannadaprabhaNewsNetwork |  
Published : Feb 15, 2026, 03:30 AM IST
ಹೆಬ್ಬಳ್ಳಿಯಲ್ಲಿ ನಡೆದಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಜೀವನದ ಮೂಲದಲ್ಲಿ ಮತ್ತು ಸುತ್ತಲಿನ ಸಂಬ೦ಧಗಳಲ್ಲಿ ದೈವತ್ವವಿದೆ. ಸಂರಕ್ಷಣೆ ಮಾಡುವ ಜತೆಗೆ ಜೀವನ ವಿಧಾನದ ನೀತಿ-ನಿಯಮಗಳ ಸಂಸ್ಕಾರ ನೀಡುವ ತಂದೆಯೂ ದೈವಿರೂಪ.

ಧಾರವಾಡ:

ತನ್ನೆದೆಯ ಅಮೃತವನ್ನುಣಿಸಿ ಬೆಳೆಸಿ ಮನುಷ್ಯನನ್ನಾಗಿ ಮಾಡಿದ ಮೊದಲ ಗುರು, ನಿಸ್ವಾರ್ಥ ಪ್ರೀತಿಯ ದೈವೀರೂಪ ತಾಯಿ. ತಾಯಿಯ ಸ್ಮರಣೆ ನಿತ್ಯವೂ ಅಂತರ೦ಗದಲ್ಲಿರಬೇಕು ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯದ 2ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೀವನದ ಮೂಲದಲ್ಲಿ ಮತ್ತು ಸುತ್ತಲಿನ ಸಂಬ೦ಧಗಳಲ್ಲಿ ದೈವತ್ವವಿದೆ. ಸಂರಕ್ಷಣೆ ಮಾಡುವ ಜತೆಗೆ ಜೀವನ ವಿಧಾನದ ನೀತಿ-ನಿಯಮಗಳ ಸಂಸ್ಕಾರ ನೀಡುವ ತಂದೆಯೂ ದೈವಿರೂಪ. ದೈವತ್ವದ ಜೀವಂತ ಪ್ರತಿನಿಧಿಯಾದ ಶ್ರೀಗುರು (ಆಚಾರ‍್ಯರು) ಸಂಸ್ಕೃತಿ, ಪರಂಪರೆ, ಅಧ್ಯಾತ್ಮದ ನೆಲೆಯಲ್ಲಿ ಸಾಕ್ಷಾತ್ಕಾರ ಸಂಪಾದಿಸುವ ಬಗೆಯನ್ನು ಬೋಧಿಸುತ್ತಾರೆ. ಅದಕ್ಕೆಂದೇ ತಾಯಿ, ತಂದೆ ಮತ್ತು ಆಚಾರ್ಯರನ್ನು ದೇವರೆಂದು ಅರಿತು ನಡೆಯಲು ಉಪನಿಷತ್ತುಗಳು ಸಲಹೆ ನೀಡುತ್ತವೆ ಎಂದರು.

ಆಧ್ಯಾತ್ಮಿಕ ಪ್ರವಚನ ನೀಡಿದ ಕಲಬುರಗಿ ಜಿಲ್ಲೆ ಶಹಬಾದ ತಾಲೂಕು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಮಾನವನ ಜೀವನದಲ್ಲಿ ಅಧ್ಯಾತ್ಮ ಕೇವಲ ಆಚರಣೆಯಾಗದೆ ಅದು ಆತ್ಮ ಸಾಕ್ಷಾತ್ಕಾರದ ಹುಡುಕಾಟವಾಗಿದೆ. ಅಧ್ಯಾತ್ಮವು ಪ್ರೀತಿ, ದಯೆ, ಕ್ಷಮೆ, ಸಹನೆ ಮುಂತಾದ ಮೌಲಿಕ ಗುಣಗಳನ್ನು ಬೆಳೆಸುತ್ತದೆ. ಬದುಕಿನ ಅನಂತ ಒತ್ತಡಗಳನ್ನು ನಿಖರ ನೆಲೆಯಲ್ಲಿ ನಿಭಾಯಿಸಲು ಅಧ್ಯಾತ್ಮವು ಆತ್ಮವಿಶ್ವಾಸ, ಧೈರ್ಯ, ಸಂಯಮವನ್ನು ತುಂಬುತ್ತದೆ. ಅಧ್ಯಾತ್ಮವು ಅಂತರ೦ಗದ ಬೆಳಗನ್ನು ಕಾಣಲು ಜ್ಯೋತಿ ಹೊತ್ತಿಸುತ್ತದೆ ಎಂದು ಹೇಳಿದರು.

ಗಿರಿಮಲ್ಲಯ್ಯ ಉಮಚಗಿಮಠ, ಗುರುಸಿದ್ಧಯ್ಯ ಮಠಪತಿ, ಮಲ್ಲಪ್ಪ ತೇಗೂರ, ಚೆನ್ನು ಬೆಟಗೇರಿ, ನಿಂಗಪ್ಪ ತೇಗೂರ, ಮನೋಜ ಆಯಟ್ಟಿ, ಏಗಪ್ಪ ದೇಸಾಯಿ, ಈರಣ್ಣ ಲಕ್ಕಮ್ಮನವರ, ಆಕಾಶ ಹಡಪದ, ಶ್ರೀಶೈಲ ಲಕ್ಕಮ್ಮನವರ, ಮಲ್ಲಿಕಾರ್ಜುನ ಯಾವಗಲ್ಲ, ಶ್ರೀಶೈಲ ದೇಸಾಯಿ, ಆಕಾಶ ಏಣಗಿ, ಶ್ರವಣಕುಮಾರ ಜೋಲಿ ಇದ್ದರು. ಉಮೇಶ ಅಕ್ಕಿ ನಿರೂಪಿಸಿದರು. ಸಂಜು ಮೊರಬದ ವಂದಿಸಿದರು. ಆಕಾಶವಾಣಿ ಕಲಾವಿದ ಗದಗ ವೀರೇಶ್ವರ ಪುಣ್ಯಾಶ್ರಮದ ವೀರೇಶಕುಮಾರ ಮಳಲಿ ಸಂಗೀತ ಕಾರ್ಯಕ್ರಮ ನಡೆಸಿದರು. ಸಿದ್ಧರಾಮ ಬ್ಯಾಕೋಡ ತಬಲಾ ಸಾಥ್‌ ನೀಡಿದರು. ಕಾರ‍್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪದ ಕಲೆ, ಸಂಸ್ಕೃತಿ ಪರಂಪರೆಯ ಜೀವಾಳ
ಸಂಗೀತ ಆಲಿಸುವಿಕೆಯಿಂದ ನಿಜಶಾಂತಿ ನೆಮ್ಮದಿ: ಡಾ. ರಾಧಿಕಾ