ಕನ್ನಡಪ್ರಭ ವಾರ್ತೆ ತುಮಕೂರು7ನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಲ್ಲಿನ ಮಹಾನಗರಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘದ ಕರೆಯ ಮೇರೆಗೆ ಅಧಿಕಾರಿ, ನೌಕರರು ಬುಧವಾರ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ಈ ಸಂಬಂಧ ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಅಧಿಕಾರಿ, ನೌಕರರು, ರಾಜ್ಯ ಸಂಘದ ವತಿಯಿಂದ ಸರ್ಕಾರಕ್ಕೆ ನೀಡಿರುವ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಬರುವ ಮೇ 26 ರಂದು ಸಾಂದರ್ಭಿಕ ರಜೆ ಹಾಕಿ, ನ್ಯಾಯಯುತ ಬೇಡಿಕೆಗಳನ್ನು ಪಡೆಯುವ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿ, ಅನಿವಾರ್ಯ ಕಾರಣಗಳಿಂದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿರುತ್ತದೆ ಎಂದು ಹೇಳಿದರು. ಹಂತಹಂತವಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.ಮಹಾನಗರ ಪಾಲಿಕೆಗಳು ಖಾಯಂ ನೌಕರರ ವೇತನಾನುದಾನಕ್ಕೆ ನಿಗದಿತ ನಮೂನೆ ಅಪೆಂಡಿಕ್ಸ್-ಬಿಯಲ್ಲಿ ಸಲ್ಲಿಸಿದ್ದ ಬೇಡಿಕೆಯಲ್ಲಿ ಶೇ.90/ಶೇ.85ರಷ್ಟು ಅನುದಾನವನ್ನು ಮಾತ್ರ ಹಂಚಿಕೆ ಮಾಡಿ ವ್ಯತ್ಯಾಸದ ಉಳಿಕೆ ಶೇ.10/ಶೇ.15 ಅನುದಾನವನ್ನು ಮಹಾನಗರ ಪಾಲಿಕೆಗಳು ಕ್ರೋಢೀಕರಿಸಿದ ಸ್ವಂತ ಸಂಪನ್ಮೂಲಗಳಿಂದ ಭರಿಸಲು ಆರ್ಥಿಕ ಇಲಾಖೆಯ 2025-26ನೇ ಸಾಲಿನ ಆಯವ್ಯಯ ವೆಚ್ಚ ಸಂಪುಟ-04 ರಟಿಪ್ಪಣಿಯಂತೆ ಪೌರಾಡಳಿತ ನಿರ್ದೇಶನಾಲಯದಿಂದ ಆದೇಶ ಹೊರಡಿಸಲಾಗಿದೆ. ಸದರಿ ಆದೇಶವನ್ನು ಹಿಂಪಡೆದು, ಖಾಯಂ ನೌಕರರ ವೇತನಾನುದಾನಕ್ಕೆ ಅವಶ್ಶವಿರುವ ಸಂಪೂರ್ಣ ಅನುದಾನವನ್ನು ಎಸ್‌ಎಫ್‌ಸಿ ನಿಧಿಯಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.