ಬೆಂಗಳೂರು : ರಾಜ್ಯದ ದೇವಸ್ಥಾನಗಳಿಗೆ ಸೂರು ಕಲ್ಪಿಸುವ ಮತ್ತು ದೇಗುಲಗಳ ನಿರ್ವಹಣೆ ಮಾಡುವ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಗೇ ಸ್ವಂತ ಸೂರಿಲ್ಲ. ಅದಕ್ಕಾಗಿಯೇ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮುತುವರ್ಜಿಯಲ್ಲಿ 5 ಮಹಡಿಯ ಧಾರ್ಮಿಕ ಸೌಧ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ರಾಜ್ಯದಲ್ಲಿನ ಸಾವಿರಾರು ದೇವಸ್ಥಾನಗಳ ಸುಪರ್ದಿಯನ್ನು ಹೊಂದಿರುವ, ಅವುಗಳ ನಿರ್ವಹಣೆಗೆ ಅನುದಾನ ನೀಡುವ ಮುಜರಾಯಿ ಇಲಾಖೆ ಈಗಲೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಚಾಮರಾಜಪೇಟೆ ಮಿಂಟೋ ಆಸ್ಪತ್ರೆ ಬಳಿಯ ಖಾಸಗಿ ಕಟ್ಟಡದಲ್ಲಿ ಮುಜರಾಯಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ 11 ಲಕ್ಷ ರು. ಬಾಡಿಗೆ ಪಾವತಿಸುತ್ತಿದೆ. ಹೀಗೆ ಕೇಂದ್ರ ಕಚೇರಿಯ ಬಾಡಿಗೆ ಮೊತ್ತಕ್ಕಾಗಿಯೇ ವಾರ್ಷಿಕ 1.32 ಕೋಟಿ ರು. ವ್ಯಯಿಸಲಾಗುತ್ತಿದೆ. ಅದನ್ನು ಉಳಿಸಲು ಹಾಗೂ ಮುಜರಾಯಿ ಇಲಾಖೆಗೆ ಸ್ವಂತ ಸೂರು ಕಲ್ಪಿಸಲು ಮತ್ತು ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿಗಳು ಒಂದೆಡೆ ಸಿಗುವಂತೆ ಮಾಡುವ ಉದ್ದೇಶದಿಂದ ಧಾರ್ಮಿಕ ಸೌಧ ನಿರ್ಮಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
27.70 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ:
ಧಾರ್ಮಿಕ ಸೌಧ ನಿರ್ಮಾಣಕ್ಕೆ ಕೆ.ಆರ್. ವೃತ್ತದ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ಸೇರಿದ 919 ಚದರ ಮೀ. (38241 ಚದರ ಅಡಿ) ವಿಸ್ತೀರ್ಣದ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಸೌಧ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖೆ ಪರಿಷತ್ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದಕ್ಕೆ ಇದೀಗ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಒಟ್ಟಾರೆ 27.70 ಕೋಟಿ ರು. ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಿಸಲು ಯೋಜಿಸಲಾಗಿದೆ.
ಕಟ್ಟಡದ ನೀಲಿನಕ್ಷೆ ಸಿದ್ಧ:
ಧಾರ್ಮಿಕ ಸೌಧ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ನೀಲಿನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಹೊಯ್ಸಳ ಶೈಲಿಯಲ್ಲಿ ಕಟ್ಟಡ ನಿರ್ಮಿಸುವ ಕುರಿತಂತೆ ಪ್ರಸ್ತಾಪಿಸಲಾಗಿದೆ. ಈ ಕಟ್ಟಡದಲ್ಲಿ ದ್ರಾವಿಡ ಮತ್ತು ನಾಗರ ಶೈಲಿ (ಹೊಯ್ಸಳ ಶೈಲಿ)ಯ ಮಿಶ್ರಣ, ರಾಮಾಯಣ, ಮಹಾಭಾರತದ ದೃಶ್ಯಾಂತಗಳನ್ನು ವಿವರಿಸುವ ಕೆತ್ತನೆಗಳು ಅಥವಾ ಕಲಾಕೃತಿಗಳು ಇರಲಿವೆ. ಅದರ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತಹ ಕಲಾಕೃತಿಗಳನ್ನೂ ಕಟ್ಟಡದ ಒಳಭಾಗದಲ್ಲಿ ಅಳವಡಿಸಲಾಗುತ್ತದೆ.
5 ಮಹಡಿಯ ಕಟ್ಟಡ:
ಮುಜರಾಯಿ ಮತ್ತು ಲೋಕೋಪಯೋಗಿ ಇಲಾಖೆಗಳು ನಿರ್ಧರಿಸಿರುವಂತೆ ಒಟ್ಟು 5 ಮಹಡಿಯ ಕಟ್ಟಡ ನಿರ್ಮಿಸಲಾಗುತ್ತದೆ. ಅದರಂತೆ ನೆಲಮಹಡಿಯನ್ನು ವಾಹನ ನಿಲುಗಡೆಗೆ ಮೀಸಲಿರಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಇಲಾಖೆ ಆಯುಕ್ತರ ಕಚೇರಿ, ಲೆಕ್ಕಪತ್ರ ಕಚೇರಿ, ಎಂಜಿನಿಯರ್‌ಗಳ ಕಚೇರಿ ಇರಲಿದೆ. ಎರಡನೇ ಮಹಡಿಯಲ್ಲಿ, ಆಗಮ ಕಚೇರಿ, ಸಭಾ ಕೊಠಡಿ ಇರಲಿದೆ. ಮೂರನೇ ಮಹಡಿಯಲ್ಲಿ ಮೇಲ್ವಿಚಾರಕರ ಕಚೇರಿ, ಸಭಾ ಕೊಠಡಿ, ಸರ್ವೇ ಕಚೇರಿ, ತೆರೆದ ಕಚೇರಿಗಳು, ನಾಲ್ಕನೇ ಮಹಡಿಯಲ್ಲಿ ಡಿಜಿಟಲ್ ಗ್ರಂಥಾಲಯ, ಆರ್‌ಡಿಪಿಆರ್ ಕೊಠಡಿ, ಸರ್ವರ್ ರೂಂ, 5ನೇ ಮಹಡಿಯಲ್ಲಿ ತೆರಿಗೆ ಕಚೇರಿ ಸೇರಿದಂತೆ ಇನ್ನಿತರ ಅಧಿಕಾರಿಗಳ ಕೊಠಡಿಗಳಿರಲಿವೆ.