ಮೈಸೂರು : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಮೊದಲ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆ ಸೇರಿಕೊಂಡಿರುವ 9 ಆನೆಗಳ ತೂಕವನ್ನು ಸೋಮವಾರ ಪರೀಕ್ಷಿಸಲಾಯಿತು. 25 ವರ್ಷದ ಭೀಮ, 5465 ಕೆ.ಜಿ. ತೂಕದೊಂದಿಗೆ ಮೊದಲ ಸ್ಥಾನ ಪಡೆಯಿತು.
ನಿತ್ಯ ನಡಿಗೆ ತಾಲೀಮು ಆರಂಭ: ಆನೆಗಳಿಗೆ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ನಿತ್ಯ ನಡಿಗೆ ತಾಲೀಮು ಕೂಡ ನಡೆಸಲಾಗುವುದು ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್, ಡಾ.ಐ.ಬಿ.ಪ್ರಭುಗೌಡ ತಿಳಿಸಿದ್ದಾರೆ.
ದಸರಾ ಗಜಪಡೆಗೆ ಮೊಳಕೆ ಕಾಳು, ಭತ್ತ, ಬೆಲ್ಲ, ಬೆಣ್ಣೆ, ವಿವಿಧ ಬಗೆಯ ಸೊಪ್ಪುಗಳ ಜೊತೆಗೆ ಕೊಬ್ಬರಿ, ತೆಂಗಿನಕಾಯಿಯನ್ನು ಪ್ರತಿದಿನ ಎರಡು ಬಾರಿ ನೀಡಲಾಗುತ್ತದೆ. ಅಂಬಾರಿ ಹೊರುವ ಅಭಿಮನ್ಯು ಆನೆಗೆ ವಿಶೇಷ ಆಹಾರದ ಜೊತೆಗೆ ಹೆಚ್ಚಿನ ಬೆಣ್ಣೆ, ಬೆಲ್ಲ ಹಾಗೂ ಕೊಬ್ಬರಿ, ಕಬ್ಬು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ದಸರಾ ಆನೆಗಳು ತೂಕ (ಕೆ.ಜಿ.ಗಳಲ್ಲಿ)
1. ಭೀಮ 5465
2. ಅಭಿಮನ್ಯು 5360
3. ಧನಂಜಯ 5310
4. ಏಕಲವ್ಯ 5305
5. ಮಹೇಂದ್ರ 5120
6. ಪ್ರಶಾಂತ 5110
7. ಕಂಜನ್ 4880
8. ಲಕ್ಷ್ಮೀ 3730
9. ಕಾವೇರಿ 3010
59 ವರ್ಷದ ಅಂಬಾರಿ ಆನೆ ಅಭಿಮನ್ಯು 5360 ಕೆ.ಜಿ. ತೂಕದೊಂದಿಗೆ 2ನೇ ಸ್ಥಾನ ಪಡೆಯಿತು. ಉಳಿದಂತೆ, 45 ವರ್ಷದ ಧನಂಜಯ ಆನೆ 5310 ಕೆ.ಜಿ.ತೂಕದೊಂದಿಗೆ 3ನೇ ಸ್ಥಾನ, 40 ವರ್ಷದ ಏಕಲವ್ಯ ಆನೆ 5305 ಕೆ.ಜಿ. ತೂಕದೊಂದಿಗೆ 4ನೇ ಸ್ಥಾನ, 42 ವರ್ಷದ ಮಹೇಂದ್ರ ಆನೆ 5120 ಕೆ.ಜಿ. ತೂಕದೊಂದಿಗೆ 5ನೇ ಸ್ಥಾನ, 53 ವರ್ಷದ ಪ್ರಶಾಂತ ಆನೆ 5110 ಕೆ.ಜಿ. ತೂಕದೊಂದಿಗೆ 6ನೇ ಸ್ಥಾನ, 26 ವರ್ಷದ ಕಂಜನ್ ಆನೆ 4880 ಕೆ.ಜಿ. ತೂಕದೊಂದಿಗೆ 7ನೇ ಸ್ಥಾನ ಪಡೆಯಿತು.
ಇನ್ನು, 54 ವರ್ಷದ ಲಕ್ಷ್ಮಿ, 3730 ಕೆ.ಜಿ.ತೂಕದೊಂದಿಗೆ 8ನೇ ಸ್ಥಾನ ಹಾಗೂ 45 ವರ್ಷದ ಕಾವೇರಿ, 3010 ಕೆ.ಜಿ. ತೂಕದೊಂದಿಗೆ 9ನೇ ಸ್ಥಾನ ಪಡೆಯಿತು.
ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ-ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೇಲೆ ನಿಲ್ಲಿಸಿ, ಆನೆಗಳ ತೂಕ ಮಾಡಲಾಯಿತು. ಪ್ರತಿ ಆನೆಗೆ 50 ರೂಪಾಯಿಗಳಂತೆ 9 ಆನೆಗಳಿಗೆ 450 ರೂ.ಅನ್ನು ಅರಣ್ಯ ಇಲಾಖೆಯವರು ಪಾವತಿಸಿದರು.