ಸುಗಮ ಸಂಗೀತ ಸಮ್ಮೇಳನಕ್ಕೆ ಅದ್ಧೂರಿ ತೆರೆ

Published : Aug 04, 2025, 08:33 AM IST
music

ಸಾರಾಂಶ

ನಗರದಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಭಾನುವಾರ ತೆರೆ ಬಿತ್ತು.

  ಮೈಸೂರು :  ನಗರದಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಭಾನುವಾರ ತೆರೆ ಬಿತ್ತು.

ನಗರದ ಕಲಾಮಂದಿರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಆಯೋಜಿಸಿದ್ದ ‘ಗೀತೋತ್ಸವ-2025’ರ ಅಂಗವಾಗಿ ನಡೆದ ಲಘು ಸಂಗೀತ ಮಾದರಿಯ ಸುಗಮ ಸಂಗೀತದ ಗಾಯನ ಮಹೋತ್ಸವಕ್ಕೆ ಅಬಾಲವೃದ್ಧರಾದಿಯಾಗಿ ಎಲ್ಲರೂ ತಲೆದೂಗಿದರು. ಸುಗಮ ಸಂಗೀತ ಸಮ್ಮೇಳನದಲ್ಲಿ ಭಾನುವಾರ ನಡೆದ ನವ್ಯ-ನವೋದಯ ಕವಿಗೀತೆಗಳು, ರಾಗಾಧಾರಿತ ಗೀತೆಗಳ ಗಾಯನ ಎಲ್ಲರ ಮನಸೂರೆಗೊಂಡಿತು.

ಮುಂಜಾನೆಯಿಂದಲೇ ಮೋಡ ಕವಿದ ಅಹ್ಲಾದಕರ ವಾತಾವರಣದಲ್ಲಿ ಹಮ್ಮಿಕೊಂಡಿದ್ದ ಶಾಸ್ತ್ರೀಯ ಗೀತೆಗಳ ಗಾಯನ ಮಜ್ಜನದಲ್ಲಿ ಸಾಂಸ್ಕೃತಿಕ ನಗರಿ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಂಗೀತ ಪ್ರಿಯರು ಮಿಂದೆದ್ದರು.

ದಸರಾ ಸಂದರ್ಭ ಹೊರತುಪಡಿಸಿ ಉಳಿದ ಸಮಯದಲ್ಲಿ ಶಾಸ್ತ್ರೀಯವಾಗಿ ಮತ್ತು ಪ್ರಖ್ಯಾತ ಗಾಯಕರಿಂದ ಗಾಯನೋತ್ಸವ ನಡೆದಿರುವುದು ಇದೇ ಮೊದಲು. ಕಂಚಿನ ಕಂಠದ ಗಾಯಕರು ಶುಶ್ರಾವ್ಯವಾಗಿ ಗಾಯನದ ಝರಿಯನ್ನು ಹರಿಸಿದರು.

ನವ್ಯ- ನವೋದಯ ಕವಿಗೀತೆಗಳ ಗಾಯನದಲ್ಲಿ ಪಿ.ಶಿವಶಂಕರ್‌ ಅವರು ಆನಂದಕಂದ ರಚನೆಯ ‘ನಾ ಸಂತಿಗೆ ಹೋಗಿನ್ನಿ’ ಜಾನಪದ ಶೈಲಿ ಗೀತೆಯನ್ನು ಶ್ರುತಿ ಬದ್ಧವಾಗಿ ಹಾಡಿ ಮೆಚ್ಚುಗೆಗೆ ಪಾತ್ರರಾದರು. ಹಾಡು ಮುಗಿದ ನಂತರವೂ ಈ ಗೀತೆ ಹಲವರ ಬಾಯಲ್ಲಿ ಗುನುಗಿತು.

ಸುಗಮ ಸಂಗೀತದ ಒಂದೊಂದು ರಾಗವೂ ಮೆದುವಾಗಿ ಮನಗಳನ್ನು ಚುಂಬಿಸಿ ಲಹರಿ ಹರಿಸಿತು. ನವ ಅನ್ವೇಷಣೆ, ರಾಗಾಧಾರಿತ ಸುಗಮ ಶಾಸ್ತ್ರೀಯ ಗಾಯನ, ಗೀತ ನೃತ್ಯ, ಕವಿಯ ನೋಡಿ-ಕವಿತೆ ಕೇಳಿ, ಗೀತ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಕುಳಿತ ಜಾಗದಿಂದ ಮೇಲೆಳದಂತೆ ಮೋಡಿ ಮಾಡಿದವು. ಒಂದೊಂದು ಗೀತೆಗೂ ಚಪ್ಪಾಳೆ ತಟ್ಟಿ ಸಂಗೀತ ರಸಿಕರು ಪ್ರೋತ್ಸಾಹಿಸಿದರು.

ಕವಿ ಕಡಂಗೊಡ್ಲು ಶಂಕರ ಭಟ್ಟ ಅವರ ರಚನೆಯ ‘ನಾಳೆಯ ಚಿಂತೆ ಬಿಟ್ಟು ಬಿಡು, ಬದುಕಿನ ಗೊಡವೆ ಸುಟ್ಟು ಬಿಡು’ ಎಂಬ ಗೀತೆಯನ್ನು ಶಶಿಕಲಾ ಸುನೀಲ್ ಮನೋಜ್ಞವಾಗಿ ಹಾಡಿ ರಂಜಿಸಿದರು.

ಡಿ.ಎಸ್ ಕರ್ಕಿ ಅವರ ‘ತೂಗುವ ತೊಟ್ಟಿಲ ತಾಯೇ ಮತ್ತೊಮ್ಮೆ ತೂಗು ನೀನೇ’ ಎಂಬ ಗೀತೆಯನ್ನು ಸುನೀತ ಶ್ರೀಪಾದ ರಾವ್ ಅವರು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗಾಯಕಿ ರೋಹಿಣಿ ಮೋಹನ್ ಅವರು ಡಿವಿಜಿ ಅವರ ಕೆಲವು ಕಗ್ಗಗಳನ್ನು ಹಾಡಿದರು. ತೀನಂಶ್ರೀ ರಚನೆಯ ‘ಮಿಕ್ಕವರಲಿ ನಗೆ ಕೂಡುತ ಬೆರೆವೆ’ ಗೀತೆಯನ್ನು ಹಾ.ಸು.ರವಿರಾಜ್ ಹಾಡಿದರು.

ಡಾ.ವಿ.ಸೀತಾರಾಮಯ್ಯ ರಚನೆಯ ಕಾದಿರುವಳು ಶಬರಿ ಗೀತೆಯನ್ನು ಅರ್ಪಣ ನರೇಂದ್ರ ಹಾಡಿ, ನೆರೆದಿದ್ದವರ ಮನಕ್ಕೆ ಶಬರಿಯ ಕಾಯುವಿಕೆಯ ಪರಿಯನ್ನು ತಂದಿಟ್ಟರು. ಪಂಜೆ ಮಂಗೇಶರಾಯರ ‘ಮೂಡುವನು ರವಿ’ ಗೀತೆಗೆ ಜಯಶ್ರೀ ಶ್ರೀಧರ್ ಧ್ವನಿಯಾದರು.

ಗಾಯಕ ನಿತಿನ ರಾಜಾರಾಂ ಶಾಸ್ತ್ರೀ, ‘ಮನಸೇ ಮನಸಿನ’ ಗೀತೆಯನ್ನು ಪಂತುವರಾಳಿ ರಾಗದಲ್ಲಿ ಹಾಡಿ ತಮ್ಮ ಶಾಸ್ತ್ರೀಯ ಗಾಯನದ ಶೈಲಿಯನ್ನು ಪ್ರಸ್ತುತಪಡಿಸಿದರು. ಜೈಜಯವಂತಿ ರಾಗದಲ್ಲಿ ಗಾಯಕಿ ನಾಗಚಂದ್ರಿಕಾ ಭಟ್ ‘ನಾನಳಿದ ಮೇಲೆನ್ನ’ ಗೀತೆ ಹಾಡಿ ಮೆಚ್ಚುಗೆ ಗಳಿಸಿದರು.

ಇದಕ್ಕೂ ಮುನ್ನ ನವ ಅನ್ವೇಷಣೆ ಗಾಯನದಲ್ಲಿ ಶಶಿಧರ ನರಸಿಂಹಮೂರ್ತಿ, ಆರ್‌.ಪ್ರಕೃತಿ, ಋತ್ವಿಕ್‌, ಬಿ.ಆರ್‌.ಇಂಚರಾ, ನಿಶ್ಚಯ್‌ ಜೈನ್‌, ಸಿರಿ ಗೌರಿ, ಹಾರ್ದಿಕಾ, ಸಾಕೇತ್‌ ಶಾಸ್ತ್ರಿ, ಪ್ರಖ್ಯಾತ್‌ ಜೀ. ರಾವ್‌, ಸಂಗೀತ್‌ ಯೋಗೀಶ್‌, ರಂಗಸ್ವಾಮಿ ಹಾಸು ಅವರು ವಿವಿಧ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ಮೈಸೂರು: ಕಳಸ್ತವಾಡಿಯಲ್ಲಿ ಭತ್ತದ ಬೆಳೆಯ ಕ್ಷೇತ್ರೋತ್ಸವ
ಕುವೆಂಪು ಸಾಧನೆ, ಕೊಡುಗೆ ಕುರಿತು 17ರಂದು ದೆಹಲಿಯಲ್ಲಿ ವಿಚಾರ ಸಂಕಿರಣ