ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಜನತಾ ಪಕ್ಷದಿಂದ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನಾಚರಣೆ ಮತ್ತು ಮೌಲ್ಯಾಧಾರಿತ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಅಧ್ಯಯನ ಮಾಡಬೇಕು. ದಾರಿಯಲ್ಲಿ ಹೋಗುವಾಗ ಬಡ ವಿಧವಾ ಹೆಣ್ಣು ಮಗಳನ್ನು ಕಂಡು ಮಾತನಾಡಿಸಿ ಕಷ್ಟ ಕೇಳಿಸಿಕೊಂಡು ವಿಧವಾ ವೇತನ ಯೋಜನೆ ಜಾರಿಗೆ ತಂದರು. ನಂತರ ಇಡೀ ದೇಶಕ್ಕೆ ಈ ಯೋಜನೆ ವಿಸ್ತರಣೆಯಾಯಿತು ಎಂದರು.
ಮೊದಲ ಬಾರಿ ರೈತರ ಸಾಲ ಮನ್ನಾ ಮಾಡಿದರು. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅವರು ಸ್ಥಾಪಿಸಿದ ಲೋಕಾಯುಕ್ತ ಸಂಸ್ಥೆ ಇಂದು ಹಲ್ಲಿಲ್ಲದೆ ಕೇವಲ ಬುಸುಗುಟ್ಟುವ ಹಾವಾಗಿದೆ. ಇಡೀ ವ್ಯವಸ್ಥೆಯೇ ಈ ರೀತಿ ಇರುವಾಗ ಯಾರನ್ನೂ ದೂಷಿಸಲಾಗದು. ಆದರೆ, ಪಾರದರ್ಶಕ, ಜನಸ್ನೇಹಿ ಸೇವೆ ಜನರಿಗೆ ಸಿಗಬೇಕು ಎಂಬ ಕನಸು ಹೆಗಡೆ ಕಂಡಿದ್ದರು. ಕಾವೇರಿ ನದಿ ನೀರು ವಿವಾದ ಪರಿಹರಿಸುವ ಯತ್ನ ಮಾಡಿದ್ದರು. ವಿಪಕ್ಷಗಳ ನಾಯಕರನ್ನು ಸ್ನೇಹಪೂರ್ವಕವಾಗಿ ಕಾಣುತ್ತಿದ್ದರು. ಆದರೆ, ಇಂದು ರಾಜಕೀಯ ಎಂಬುದು ಕಲುಷಿತವಾಗಿದೆ ಎಂದು ಪಿ.ಜಿ.ಆರ್.ಸಿಂಧ್ಯಾ ಬೇಸರ ವ್ಯಕ್ತಪಡಿಸಿದರು.ಭರತನಾಟ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ, ಮೌಲ್ಯಾಧಾರಿತ ರಾಜಕಾರಣ ಸೇರಿ ದೇಶಕ್ಕೆ, ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿರುವ ರಾಮಕೃಷ್ಣ ಹೆಗಡೆ ಅವರ 100ನೇ ಜನ್ಮ ದಿನಾಚರಣೆ ವೇಳೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು. ಇದರಿಂದ ಅವರು ನಮ್ಮ ದೇಶಕ್ಕೆ, ನಾಡಿಗೆ ಸಲ್ಲಿಸಿದ ಸೇವೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಮತಗಳು, ಚುನಾವಣೆ, ಜನಾಂಗ, ರಾಜಕೀಯ ಲಾಭ ಮುಂತಾದ ವಿಚಾರಗಳನ್ನು ನೋಡದೆ ಅವರ ಕೊಡುಗೆಯನ್ನು ಮಾನದಂಡವಾಗಿಟ್ಟುಕೊಂಡು ಭಾರತ ರತ್ನಕ್ಕೆ ಪರಿಗಣಿಸಬೇಕು ಎಂದರು.
ಕಲಾಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಹೆಗಡೆ ಅವರ ಹೆಸರಿನಲ್ಲಿ ರಾಜ್ಯದಲ್ಲಿ ಒಂದು ಕಲಾಕ್ಷೇತ್ರ ಸ್ಥಾಪಿಸಬೇಕು. ಅಲ್ಲಿ ಬಡ ಕಲಾವಿದರೂ ಪ್ರದರ್ಶನ ನೀಡಲು ಅನುಕೂಲವಾಗುತ್ತದೆ ಎಂದು ಪ್ರತಿಭಾ ಪ್ರಹ್ಲಾದ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಅವರು ಎಲ್ಲಾ ಜಾತಿ ಸಮುದಾಯಗಳ ಯುವ ರಾಜಕಾರಣಿಗಳನ್ನು ತಮ್ಮೊಂದಿಗೆ ಬೆಳೆಸಿದರು. ಮೌಲ್ಯಾಧಾರಿತ ರಾಜಕಾರಣ ಕಲಿಸಿದರು. ಕುಟುಂಬ ರಾಜಕಾರಣ ಮಾಡಲಿಲ್ಲ. ತಮ್ಮ ಕುಟುಂಬ, ಸಂಬಂಧಿಕರಿಗೇ ಏನಾದರೂ ಅನುಕೂಲ ಮಾಡಿಕೊಡಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿರದೆ ಸಮಾಜಮುಖಿಯಾಗಿದ್ದರು. ಪತ್ರಿಕೆಗಳೊಂದಿಗೆ ತೀರಾ ಹತ್ತಿರವಾಗಿರುವುದಾಗಲಿ, ದೂರ ಇಡುವುದಾಗಲಿ ಮಾಡಲಿಲ್ಲ. ಇದೇ ಕಾರಣಕ್ಕೆ ಅವರ ನಿಧನರಾಗಿ 25 ವರ್ಷಗಳಾದರೂ ಜನ ಸಾಮಾನ್ಯರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ ಎಂದು ರವಿ ಹೆಗಡೆ ತಿಳಿಸಿದರು.
ಪ್ರಶಸ್ತಿ ಪುರಸ್ಕೃತರು: