ರಾಮನಗರ: ಗೆದ್ದರೆ ಶ್ರೀರಾಮ ಮಂದಿರ ನಿರ್ಮಾಣ, ಮಡಿದರೆ ಶ್ರೀರಾಮನ ಪಾದಕ್ಕೆ ನಮ್ಮ ಪ್ರಾಣಾರ್ಪಣೆ ಎಂಬ ದೃಢ ಸಂಕಲ್ಪದೊಂದಿಗೆ ಕರಸೇವೆಗೆ ತೆರಳಿದ್ದೆವು. ಇದೀಗ ನಮ್ಮ ಜೀವತಾವಧಿಯಲ್ಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿ ರಾಮ ಲಲ್ಲನ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ ಎಂದು ಕರಸೇವಕ ಕನಕಪುರದ ಜಯಕುಮಾರ್ ತಿಳಿಸಿದರು.
ನಗರದ ಜಿಗೇನಹಳ್ಳಿಯ ವಿವೇಕಾನಂದ ನಗರದ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ಅಯೋಧ್ಯೆಯ ಕರಸೇವಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಅವರು ತಮ್ಮ ಕರಸೇವೆಯ ದಿನಗಳನ್ನು ಮೆಲುಕು ಹಾಕಿದರು.ರಾಮಮಂದಿರ ನಿರ್ಮಾಣದ ಗುರಿಯೊಂದಿಗೆ ಅಯೋಧ್ಯೆಗೆ ತೆರಳಿದ್ದ ನಮಗೆ ಮರಳಿ ಮನೆಗೆ ಬರುವ ನಂಬಿಕೆ ನಮ್ಮ ಕುಟಂಬಕ್ಕೇ ಇರಲಿಲ್ಲ. ಎಲ್ಲ ಬಂಧು ಬಾಂಧವರನ್ನು ಮಾತನಾಡಿಸಿಕೊಂಡೇ ಅಯೋಧ್ಯೆಯ ರೈಲು ಹತ್ತಿದೆವು. ಪ್ರಾಣದ ಹಂಗು ತೊರೆದು ಹೊರಟಿದ್ದ ನಮಗೆ ಯಾವುದೇ ಅಂಜಿಕೆ ಇರಲಿಲ್ಲ. ಇಂದು ಶ್ರೀರಾಮ ಮಂದಿರ ನಿರ್ಮಾಣವಾಗಿರುವುದು ಸಂತಸ ತಂದಿದೆ ಎಂದರು.
ಶ್ರೀರಾಮನ ಸೇವೆಗೆ ತೆರಳಿದ್ದ ನಮಗೆ ನಮ್ಮ ಬಂಧುಗಳು, ಕುಟುಂಬದವರು ಬೆಂಬಲವಾಗಿ ನಿಂತರು. ಶ್ರೀರಾಮನ ಕಾರ್ಯಕ್ಕೆ ತೆರಳುತ್ತಿರುವ ನಿಮಗೆ ಒಳ್ಳೆಯದಾಗುತ್ತದೆ ಎಂದು ಹಾರೈಸಿ ಕಳುಹಿಸಿಕೊಟ್ಟಿದ್ದರು. ಅವರೆಲ್ಲರ ಹಾರೈಕೆ, ದೇಶದ ಕೋಟಿ ಕೋಟಿ ರಾಮಭಕ್ತರ ಆಶಯದಂತೆ ೫೦೦ ವರ್ಷಗಳಿಂದ ಸ್ಥಗಿತಗೊಂಡಿದ್ದ ಕೆಲಸ ಕೇವಲ ೩೨ ವರ್ಷಗಳಲ್ಲಿ ನಡೆದಿದೆ ಎಂದರು.ಶವ ಸಿಗುವುದೂ ಅನುಮಾನ ಎಂದಿದ್ದರು:
ಕರಸೇವಕ ಕನಕಪುರ ದಾಸಪ್ಪ ಮಾತನಾಡಿ, ಶ್ರೀರಾಮ ಮಂದಿರ ನಿರ್ಮಾಣದ ಕರಸೇವೆಗೆ ಕರೆನೀಡಿದಾಗ ನಾನು ಬೆಂಗಳೂರಿನಲ್ಲಿನ ಕಚೇರಿಗೆ ಹೋದೆ. ಅಲ್ಲಿ ನನ್ನ ಭಾವಚಿತ್ರ ಕೊಡುವಂತೆ ಕೇಳಿದರು, ಯಾಕೆ ಎಂದು ಪ್ರಶ್ನಿಸಿದಾಗ, ನೀನು ಜೀವಂತ ಬಂದರೆ ಬರಬಹುದು, ಇಲ್ಲವಾದರೆ ನಿನ್ನ ಶವ ಸಿಗುವುದೂ ಅನುಮಾನ. ನಿಮ್ಮ ಭಾವಚಿತ್ರ ಇಟ್ಟುಕೊಂಡಿರುತ್ತೇವೆ. ನೀನು ಬರದಿದ್ದರೆ ನಿನ್ನ ಮನೆಗೆ ಸುದ್ದಿ ಕಳುಹಿಸುತ್ತೇವೆ ಎಂದು ಹೇಳಿದ್ದರು.ಅದಕ್ಕೆ ನಾನು ಶ್ರೀರಾಮನ ಸೇವೆಗೆ ನನ್ನನು ನಾನು ಅರ್ಪಣೆ ಮಾಡಿಕೊಂಡಿದ್ದೇನೆ. ಅಲ್ಲಿ ಏನೇ ಸಂಭವಿಸಿದರೂ ಎಲ್ಲದಕ್ಕೂ ಸಿದ್ಧನಾಗಿಯೇ ಬಂದಿದ್ದೇನೆ ಎಂದು ತಿಳಿಸಿದ್ದೆ. ಯಾವುದೇ ಅಂಜಿಕೆ ಇಲ್ಲದೆ ಧೈರ್ಯವಾಗಿ ಅಲ್ಲಿಗೆ ಹೋಗಿ ಬಂದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಲಕ್ಷಾಂತರ ಕರಸೇವಕರ ತ್ಯಾಗ:ರಾಮನಗರದ ಕರಸೇವಕ ಕೆ.ಆರ್.ವೇಣುಗೋಪಾಲ್, ಶ್ರೀರಾಮ ಮಂದಿರಕ್ಕಾಗಿ ಲಕ್ಷಾಂತರ ಕರಸೇವಕರು ಶ್ರಮಿಸಿದ್ದಾರೆ. ಸಾಕಷ್ಟು ಕರಸೇವಕರು ತ್ಯಾಗ ಮತ್ತು ಬಲಿದಾನದಿಂದಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ. ಅಯೋಧ್ಯೆಯ ನದಿಯಲ್ಲಿ ಸಾಕಷ್ಟು ಹೆಣಗಳನ್ನು ನೋಡಿದ್ದೇನೆ. ನಾನು ಸ್ನಾನಕ್ಕೆಂದು ಸರಯೂ ನದಿಯಲ್ಲಿ ಮುಳುಗಿದಾಗ ನನ್ನ ಮೇಲೆ ಹೆಣವೊಂದು ತೇಲಿಬಂದಿತ್ತು. ಇವರೆಲ್ಲರ ತ್ಯಾಗ ಬಲಿದಾನದಿಂದ ಇಂದು ಮಂದಿರ ನಿರ್ಮಾಣವಾಗಿದೆ. ಇಂತಹ ಮಹತ್ಕಾರ್ಯವನ್ನು ಪೂರ್ಣಗೊಳಿಸಿದ ಪ್ರಧಾನಿ ಮೋದಿ ಅವರಿಗೆ ಈ ದೇಶದ ಪ್ರತಿಯೊಬ್ಬ ಶ್ರೀರಾಮ ಭಕ್ತರೂ ಧನ್ಯವಾದ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರಸೇವೆ ಮಾಡಿದ್ದ ಜಿಲ್ಲೆಯ ಚನ್ನಪಟ್ಟಣದ ಡಿ.ರಾಮಚಂದ್ರು, ರಾಮನಗರದ ಎಸ್.ಆರ್.ನಾಗರಾಜು, ಶಿವರಾಮು, ಬೋಗ(ವಾಸು), ದಾಸಪ್ಪ, ನಾಗೇಶ್, ಮೃತ ಪುಟ್ಟಮಾಸ್ತೀಗೌಡರ ಪರವಾಗಿ ಅವರ ಮಗ ವಾಸು ಅವರಿಗೆ ಗೌರವಾರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ನಮೋ ಬ್ರಿಗೇಡ್‌ನ ಜಿಲ್ಲಾ ಸಂಚಾಲಕ ಧನಂಜಯ, ಸತೀಶ್, ನವೀನ್, ಚನ್ನವೀರಪ್ಪ, ಗೋಪಾಲ್, ಅರುಣ್ ಸಿಂಗ್, ಹರೀಶ್ ಇತರರು ಉಪಸ್ಥಿತರಿದ್ದರು.ಪೊಟೋ೭ಸಿಪಿಟ೧೧:ರಾಮನಗರದ ಜಿಗೇನಹಳ್ಳಿಯ ವಿವೇಕಾನಂದನಗರದ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ನಮೋ ಬ್ರಿಗೇಡ್ ವತಿಯಿಂದ ಅಯೋಧ್ಯೆಯ ಕರಸೇವಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.