ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿರುವ ಶ್ರೀ ಭೋಗನಂದೀಶ್ವರ, ಅರುಣಾಚಲೇಶ್ವರ, ಗಣಪತಿ, ಉಮಾಮಹೇಶ್ವರಿ ಅಮ್ಮನವರ ಜೋಡಿ ಕಲ್ಲಿನ ರಥೋತ್ಸವಕ್ಕೆ ಸಿದ್ಧತೆಗಳು ಜೋರಾಗಿ ಸಾಗಿದ್ದು ದಿನಗಣನೆ ಆರಂಭವಾಗಿದೆ. ರಥಗಳ ಅಲಂಕಾರ, ದನಗಳ ಪರಿಷೆಗೆ ಸಿದ್ಧತೆ ಜೋರಾಗಿ ನಡೆದಿದೆ.ಮಹಾಶಿವರಾತ್ರಿ ಮಾರನೆಯ ದಿನ ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ತಮಿಳುನಾಡು, ಆಂಧ್ರಪ್ರದೇಶ ತೆಲಂಗಾಣ ದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವು ಐತಿಹಾಸಿಕವಾಗಿ ಧಾರ್ಮಿಕವಾಗಿ ಪೌರಾಣಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.2025 ರಲ್ಲಿ ಹುರುಳುಗುರ್ಕಿ ವೆಂಕಟೇಗೌಡ ಎಂಬ ಉದ್ಯಮಿ ₹2.5 ಕೋಟಿ ವೆಚ್ಚದಲ್ಲಿ ಉಡುಪಿಯ ಅಷ್ಟಮಠಗಳ ರಥದ ಮಾದರಿಯಲ್ಲಿ ನೂತನ ರಥವನ್ನು ದೇವಾಲಯಕ್ಕೆ ಮಾಡಿಸಿಕೊಟ್ಟಿದ್ದಾರೆ. 54 ಅಡಿ ಎತ್ತರವಿರುವ ಈ ರಥವೇ ಇದು ಪ್ರಧಾನ ರಥವೆನಿಸಿದ್ದು, ಇದರಲ್ಲಿಯೇ ಶ್ರೀಭೋಗನಂದೀಶ್ವರಸ್ವಾಮಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಆಗಲಿದೆ.ಫೆ.16 ರಂದು ಜೋಡಿ ಬ್ರಹ್ಮ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ನೂತನ ರಥದ ಅಲಂಕಾರವನ್ನು ಕುಂದಾಪುರದ ರಥಕಟ್ಟುವ ಕಲೆಯಲ್ಲಿ ಪರಿಣಿತಿ ಪಡೆದ 10 ಮಂದಿಯ ತಂಡವು ವಾರದಿಂದ ಇಲ್ಲಿ ಬೀಡುಬಿಟ್ಟು ಶೃಂಗಾರದ ಕೆಲಸ ಮಾಡುತ್ತಿದ್ದಾರೆ.ಇದರೊಟ್ಟಿಗೆ ಒಂದು ಕಲ್ಲಿನ ರಥವೂ ಇರಲಿದ್ದು ಇದರಲ್ಲಿ ಅರುಣಾಚಲೇಶ್ವರ ಗಣಪತಿ ಸಹಿತ ಗಿರಿಜಾಂಭ ಮೂರ್ತಿಗಳು ಇರಲಿದ್ದು, ಈ ರಥದ ಅಲಂಕಾರವೂ ಭರದಿಂದ ಸಾಗುತ್ತಿದ್ದು ದೇವಾಲಯಕ್ಕೆ ಬರುವ ಭಕ್ತಾದಿಗಳು ರಥಗಳ ಶೃಂಗಾರ ಮಾಡುತ್ತಿರುವ ಕೌತುಕವನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.ದನಗಳ ಜಾತ್ರೆ ವಿಶೇಷ:
ಈ ಬಾರೀ ದನಗಳ ಜಾತ್ರೆಯೂ ಕೂಡ ವಿಶೇಷವಾಗಿದೆ. ರಥೋತ್ಸವಕ್ಕೂ ಎರಡು- ಮೂರು ವಾರಗಳ ಮೊದಲೇ ಆರಂಭವಾಗುವ ಈ ದನಗಳ ಜಾತ್ರೆಗೆ ಜಿಲ್ಲೆಯ ಸ್ಥಳೀಯರಲ್ಲದೆ ತುಮಕೂರು, ದೊಡ್ಡಬಳ್ಳಾಪುರ, ಕೋಲಾರ, ಮಾಲೂರು, ಕರ್ನೂಲು, ಆಂದ್ರ ಪ್ರದೇಶ, ತೆಲಾಂಗಣ, ತಮಿಳುನಾಡುಗಳಿಂದಲೂ ದನಗಳು ಬರುತ್ತವೆ.ಸುಮಾರು ಸಾವಿರ ವರ್ಷಗಳಿಗೂ ಪುರಾತನ ಇತಿಹಾಸವಿರುವ ದೇಗುಲದಲ್ಲಿ ಪ್ರಥಮ ಬಾರಿಗೆ 300 ರು. ಟಿಕೆಟ್‌ನ ಶಿವರಾತ್ರಿಗೆ ವಿಶೇಷ ದರ್ಶನದ ಸಾಲು ಏರ್ಪಡಿಸಿರುವುದಕ್ಕೆ ಜಿಲ್ಲಾಡಳಿತದ ವಿರುದ್ಧ ಭಕ್ತಾದಿಗಳಿಂದ ವಿರೋಧ ವ್ಯಕ್ತವಾಗಿದೆ.
ಸಿಕೆಬಿ-3 ನಂದಿಗ್ರಾಮದ ಭೋಗನಂಧೀಶ್ವರ ದೇವಾಲಯ ಆವರಣದಲ್ಲಿ ರಥಗಳ ಸಿದ್ಧತೆಸಿಕೆಬಿ-4 ದನಗಳ ಜಾತ್ರೆಗೆ ಬಂದಿರುವ ಜವಾರಿ ಎತ್ತುಗಳೊಂದಿಗೆ ಮಾಲೀಕರು