ಕನ್ನಡಪ್ರಭ ವಾರ್ತೆ, ವಿಧಾನ ಪರಿಷತ್ತು
ರಾಜ್ಯಪಾಲರ ವಂದನಾ ನಿರ್ಣಯದ ವೇಳೆ ಪ್ರತಿಪಕ್ಷಗಳ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದ ಬಳಿ ಹಣವಿಲ್ಲ, ಹೀಗಾಗಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದರು. ಆಗ ಸಮರ್ಥಿಸಿದ ಕಾಂಗ್ರೆಸ್ ಸದಸ್ಯರೊಬ್ಬರು ಕೇಂದ್ರವೇ ದಿವಾಳಿಯಾಗಿದೆ ಎಂದರು.
ಇದಕ್ಕೆ ಮಾರುತ್ತರಿಸಿದ ಬಿಜೆಪಿಯ ಭಾರತಿ ಶೆಟ್ಟಿ, ಭಾರತವು ವಿಶ್ವದ ಉತ್ತಮ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಈ ಸಾಧನೆಗೆ ಮೋದಿಯವರೇ ಕಾರಣ. ಮೋದಿಜೀಯಿಂದಲೇ ದೇಶ ಇದೆ ಎಂದರು.ಇದಕ್ಕೆ ಕಾಂಗ್ರೆಸ್‌ನ ನಸೀರ್ ಅಹ್ಮದ್ ಅವರು, ದೇಶದ ಈ ಪರಿಸ್ಥಿತಿ ಮೋದಿಯಿಂದಲೇ ಬಂದಿದೆ. ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ ಎಂದು ಕೂಗಿದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಕೇಶವಪ್ರಸಾದ್, ಸಿ.ಟಿ.ರವಿ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಪ್ರಧಾನಿಯವರನ್ನು ದೇಶದ್ರೋಹಿ ಎಂದ ನಸೀರ್ ಅಹ್ಮದ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗೆ ಇಳಿದರು. ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಆದರೆ, ಇದಕ್ಕೆ ನಸೀರ್ ಅಹ್ಮದ್ ಪ್ರತಿಕ್ರಿಯಿಸಲಿಲ್ಲ. ಇದರಿಂದ ಸಿಟ್ಟುಗೊಂಡ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು, ನಸೀರ್ ಅಹ್ಮದ್ ಅವರ ಹೇಳಿಕೆಯನ್ನು ಕಡತದಿಂದ ತೆಗೆಸಿದರೂ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರೆಸಿದ್ದರಿಂದ ಕಲಾಪವನ್ನು ಸಭಾಪತಿ ಅವರು ಮಂಗಳವಾರಕ್ಕೆ ಮುಂದೂಡಿದರು.