ವಜ್ರ ಮಹೋತ್ಸವ ಹೊಸ್ತಿಲಲ್ಲಿ ವಡ್ಡಿಗೆರೆ ಸರ್ಕಾರಿ ಶಾಲೆ

KannadaprabhaNewsNetwork |  
Published : Feb 03, 2026, 02:00 AM IST
31ಎಎನ್‌ಟಿ1ಇಪಿ:ತತ್ತೂರು ವಡ್ಡಿಗೆರೆ ಸರ್ಕಾರಿ ಶಾಲೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು. | Kannada Prabha

ಸಾರಾಂಶ

ಸೊರಬ ತಾಲೂಕಿನ ತತ್ತೂರು ವಡ್ಡಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಹಣ ಅಥವಾ ವಸ್ತುಗಳ ರೂಪದಲ್ಲಿ ದಾನ ನೀಡುವ ಮೂಲಕ, ಮೂಲಸೌಕರ್ಯದ ಜತೆಗೆ ಹಸಿರು ಗಿಡ-ಮರಗಳಿಂದ ಶಾಲೆ ಕಂಗೊಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಸೊರಬ ತಾಲೂಕಿನ ತತ್ತೂರು ವಡ್ಡಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಹಣ ಅಥವಾ ವಸ್ತುಗಳ ರೂಪದಲ್ಲಿ ದಾನ ನೀಡುವ ಮೂಲಕ, ಮೂಲಸೌಕರ್ಯದ ಜತೆಗೆ ಹಸಿರು ಗಿಡ-ಮರಗಳಿಂದ ಶಾಲೆ ಕಂಗೊಳಿಸುತ್ತಿದೆ.

ಶಾಲೆ ಪ್ರಾರಂಭವಾಗಿ 75 ವಸಂತಗಳನ್ನು ಕಳೆದಿದ್ದು, ವಜ್ರ ಮಹೋತ್ಸವದ ಹೊಸ್ತಿಲಲ್ಲಿದೆ. ನಾಲ್ಕು ಎಕರೆ ವಿಶಾಲ ಜಾಗದಲ್ಲಿ ಏಳು ಕೊಠಡಿಗಳು, ಮನರೇಗಾ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಿರ್ಮಾಣವಾದ ಹೈಟೆಕ್‌ ಶೌಚಾಲಯ, ರಂಗಮಂದಿರ, ಆಟದ ಮೈದಾನ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಶಾಲೆ ಹೊಂದಿದೆ.

ಸಚಿವ ಮಧು ಬಂಗಾರಪ್ಪ ಕಾಳಜಿ:

ಈ ಅತ್ಯುತ್ತಮ ಶಾಲೆಗೆ, ಈಗಿನ ಕಾಲದ ಶಿಕ್ಷಣದ ಬೇಡಿಕೆಗೆ ಅನುಗುಣವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್‌.ಮಧು ಬಂಗಾರಪ್ಪ ಅವರ ವಿಶೇಷ ಕಾಳಜಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಹಾಗೂ ಒಂದನೇ ತರಗತಿಯಿಂದ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ) ಶಿಕ್ಷಣ ಪದ್ಧತಿ ಆರಂಭವಾಗಲಿದೆ.

ಫಸಲು ಬರುತ್ತಿರುವ 20 ತೆಂಗಿನ ಮರ, 100 ಅಡಕೆ ಮರ, ಹೊಸದಾಗಿ ಹಚ್ಚಿರುವ 300 ಅಡಕೆ ಗಿಡ, 60 ತೆಂಗಿನ ಗಿಡ, ವಿವಿಧ ಪ್ರಭೇದದ ಗಿಡ-ಮರಗಳು, ವಿವಿಧ ಜಾತಿಯ ಹೂವಿನ ಗಿಡಗಳು ಹಾಗೂ ವಿವಿಧ ಚಂದದ ಗಿಡಗಳಿಂದ ಶಾಲೆಯ ಕೈತೋಟ ಹಚ್ಚ ಹಸಿರಿನಿಂದ ಕೂಡಿದೆ.

ಮುಖ್ಯ ಶಿಕ್ಷಕನಿಂದ 6.5 ಲಕ್ಷ ರು. ಹಣದಲ್ಲಿ ಶಾಲೆ ಅಭಿವೃದ್ಧಿ:

ಶಾಲೆಯ ಅಡಕೆ ತೋಟ ಹಾಗೂ ಕೈತೋಟಕ್ಕೆ ನೀರು ಒದಗಿಸಲು ಪೈಪ್‌ ಲೈನ್‌, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ರಕ್ಷಾ ಕವಚ, ನೆಲ ಹಾಸು, ಗ್ರೀನ್‌ ಬೋರ್ಡ್‌ ಸೇರಿದಂತೆ ವಿವಿಧ ಸವಲತ್ತುಗಳನ್ನು ಮುಖ್ಯ ಶಿಕ್ಷಕ ಕೆ. ಬಸವಂತಪ್ಪ ಅವರು ಕರ್ತವ್ಯಕ್ಕೆ ಹಾಜರಾಗಿ ಮೂರು ವರ್ಷ, ಆರು ತಿಂಗಳಲ್ಲಿ ಹಂತ-ಹಂತವಾಗಿ ಅಂದಾಜು 6.50 ಲಕ್ಷ ಸ್ವಂತ ಹಣ ಖರ್ಚು ಮಾಡಿ ಶಾಲೆಯ ಅಭಿವೃಧಿಯಲ್ಲಿ ಕೈಜೋಡಿಸಿದ್ದಾರೆ. ಪೋಷಕರು ಹಾಗೂ ಗ್ರಾಮಸ್ಥರು ಇವರ ಈ ಕೆಲಸಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

50 ಸಾವಿರ ಸಹ ಶಿಕ್ಷಕರು ಹಾಗೂ 2.50 ಲಕ್ಷ ಗ್ರಾಮದ ದಾನಿಗಳಿಂದ ವಸ್ತುಗಳ ಹಾಗೂ ಹಣದ ರೂಪದಲ್ಲಿ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

ಶಿಕ್ಷಕರಾದ ಎಚ್‌.ಲೋಕಪ್ಪ, ಸಿ. ನವಿನ, ಗೀತಾ ಉಪಳೆ, ಎಚ್‌.ಎಸ್‌ ನಮೀತಾ, ಎಚ್‌.ಎಂ ಸೌಭಾಗ್ಯ, ಭೀಮಪ್ಪ ಅವರು ಉತ್ತಮ ಪಾಠ-ಪ್ರವಚನ ಮಾಡುವ ಜತೆಗೆ, ಶಾಲೆಯ ಅಭಿವೃದ್ಧಿಯಲ್ಲೂ ಸಹಕರಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಲ್ಲಾ ಹಂತದ ಜನಪ್ರತಿನಿಧಿಗಳು ಶಾಲೆಯ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಆರ್‌.ನಿರ್ಮಲೇಸ್‌ ತಿಳಿಸಿದರು.

ವಜ್ರಮಹೋತ್ಸವಕ್ಕೆ ದಾನಿಗಳ ಸಹಕಾರ ಅಗತ್ಯ: ಶಾಲೆಗೆ 75 ವರ್ಷಗಳು ತುಂಬಿ ಎರಡು ವರ್ಷ ಕಳೆದು ಹೋಗಿದೆ. ಈ ವರ್ಷ ಗ್ರಾಮಸ್ಥರು, ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ಮುಂದೆ ಬಂದರೆ, ಅದ್ದೂರಿಯಾಗಿ ವಜ್ರಮಹೋತ್ಸವ ಸಮಾರಂಭ ಮಾಡವ ಆಶಾಭಾವನೆಯನ್ನು ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹೊಂದಿದ್ದೇವೆ.

ಆರ್‌.ನಿರ್ಮಲೇಸ್‌ ಎಸ್‌ಡಿಎಂಸಿ ಅಧ್ಯಕ್ಷ.

ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಹಾಗೂ ಒಳ್ಳೆಯ ವಾತವರಣ ಸೃಷ್ಟಿಸಲು ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಸಹ ಶಿಕ್ಷಕರು, ಬಿಇಒ, ಶಿಕ್ಷಣ ಇಲಾಖೆಯ ಎಲ್ಲರ ಸಹಕಾರದಿಂದ ಅತ್ಯುತ್ತಮ ಶಾಲೆಯಾಗಿ ರೂಪಿಸಲು ಸಾಧ್ಯವಾಗಿದೆ.

ಕೆ. ಬಸವಂತಪ್ಪ ಮುಖ್ಯ ಶಿಕ್ಷಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ