ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಹೊನಲುಬೆಳಕಿನ ‘ಒಕ್ಕಲಿಗರ ಕಪ್’ ಕಬಡ್ಡಿ ಪಂದ್ಯಾಟಕ್ಕೆ ರಾಜ್ಯ ಅಮೆಚೂರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಸಿ.ಸುರೇಶ್ ಹಾಗು ದಾನಿ ಕಿರಗಂದೂರು ಎ.ಎನ್.ಪದ್ಮನಾಭ ಶುಕ್ರವಾರ ರಾತ್ರಿ ಚಾಲನೆ ನೀಡಿದರು.ರಾಷ್ಟ್ರಮಟ್ಟದ 21 ಬಲಿಷ್ಠ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಅಮೆಚೂರು ಕಬಡ್ಡಿ ಅಸೋಸಿಯೇಷನ್ ನೊಂದಾಯಿತ ರಾಜ್ಯದ 8 ಮಹಿಳಾ ತಂಡಗಳು ಅಂಕಣದಲ್ಲಿ ಸೆಣಸುತ್ತಿವೆ.
ಶುಕ್ರವಾರ ರಾತ್ರಿ 1 ಗಂಟೆಯ ತನಕ ಪಂದ್ಯಗಳು ನಡೆದವು. ಶನಿವಾರ ಬೆಳಗ್ಗೆ 10.30ರಿಂದ ಪಂದ್ಯಾಟಗಳು ಪ್ರಾರಂಭವಾಗಿ ಮಧ್ಯರಾತ್ರಿಯ ತನಕ ನಡೆದವು.ಅರ್ಜುನ್ ಪ್ರಶಸ್ತಿ ವಿಜೇತ ಹಾಗು ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಹಾಪೋಷಕ ಬಿ.ಸಿ.ರಮೇಶ್, ಅಧ್ಯಕ್ಷ ಬಿ.ಸಿ. ಸುರೇಶ್, ಕೊಡಗು ಜಿಲ್ಲಾಧ್ಯಕ್ಷ ಉತ್ತಪ್ಪ, ರಾಜ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಎಂ.ಷಣ್ಮುಗಮ್, ಬೆಂಗಳೂರು ಅಧ್ಯಕ್ಷ ಶಿವಲಿಂಗಪ್ಪ ಅವರು ಉಸ್ತುವಾರಿಯಲ್ಲಿ ಪಂದ್ಯಗಳು ನಡೆಯುತ್ತಿವೆ.
ಸ್ಥಳೀಯ ವಾದ್ಯತಂಡ ಮತ್ತು ನಾಸಿಕ್ ಬ್ಯಾಂಡ್‌ನವರು ಆಟಗಾರರನ್ನು ಅಂಕಣಕ್ಕೆ ಕರೆ ತರುವುದು ವಿಶೇಷವಾಗಿತ್ತು. ಒಕ್ಕಲಿಗ ಯುವವೇದಿಕೆಯ ನೂರಾರು ಸದಸ್ಯರ ಉಸ್ತುವಾರಿಯಲ್ಲಿ ಪಂದ್ಯಗಳು ನಡೆಯುತ್ತಿವೆ.ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ರೈಸಿಂಗ್ ಬುಲ್ಸ್ ತಂಡ, ಬೆಂಗಳೂರು ಸಿಟಿ ಪೊಲೀಸ್ ತಂಡದ ವಿರುದ್ಧ 57-31 ಅಂತರದಲ್ಲಿ ಭರ್ಜರಿ ಗೆಲುವು ಪಡೆಯಿತು. ಬ್ಯಾಂಕ್ ಆಫ್ ಬರೋಡ ತಂಡ ಸಂಜಯ್ ಗೌತಮ್ ಕೊಲ್ಲಾಪುರ ತಂಡದ ವಿರುದ್ಧ 61-35 ಅಂತರದಲ್ಲಿ ಗೆಲವು ಸಾಧಿಸಿತು. ವಿಎಸ್‌ಐ ಡೆಲ್ಲಿ ತಂಡ, ಎನ್‌ಸಿಎಸ್‌ಐ ರ‍್ಯಾಣ ತಂಡದ ವಿರುದ್ಧ 44-14 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. 2ನೇ ಅಂಕಣದಲ್ಲಿ ನಡೆದ ಮಹಿಳೆಯರ ಕಬಡ್ಡಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ತಂಡ, ರವಿ ಅಕಾಡೆಮಿ ತಂಡದ ವಿರುದ್ಧ 53-12 ಅಂತರದಲ್ಲಿ ಜಯ ಸಾಧಿಸಿತು. ಮೈಸೂರು ಜಿಲ್ಲಾ ತಂಡ, ಬೆಂಗಳೂರು ಮಾತೃಪ್ರತಿಷ್ಠಾನ ದ ವಿರುದ್ಧ 30-4 ಅಂತರದಲ್ಲಿ ಗೆಲುವಿನ ನಗೆ ಬೀರಿತು.
ಶನಿವಾರ ಬೆಳಗ್ಗೆ ನಡೆದ ಪಂದ್ಯಾಟದಲ್ಲಿ ರ‍್ಯಾಣ ಸ್ಪೋರ್ಟ್ಸ್ ಕ್ಲಬ್ ತಂಡ ಭಾರಮತಿ ತಂಡದ ವಿರುದ್ದ 38-25 ಅಂಕಗಳ ಅಂತರ ಗೆಲುವು ಕಂಡಿತು. ಇನ್‌ಕಮ್ ಟ್ಯಾಕ್ಸ್ ಚೆನೈ ತಂಡ ಮಿಡಲ್ ಲೈನ್ ಮುಂಬೈ ವಿರುದ್ಧ 38- 35 ಅಂಕಗಳ ಅಂತರದಲ್ಲಿ ರೋಚಕ ಗೆಲವು ಸಾಧಿಸಿತು. ರ‍್ಡಿನೆನ್ಸ್ ಫ್ಯಾಕ್ಟರಿ ಡೆಲ್ಲಿ ತಂಡ, ಸಂಜಯ್ ಗಡಾವತ್ ಕೊಲ್ಲಾಪುರ ತಂಡದ ವಿರುದ್ದ 46-27 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿತು. ಟಿಎಂಸಿ ತಾನೆ ತಂಡ, ಯುವ ಬುಲ್ಸ್ ಬೆಂಗಳೂರು ತಂಡದ ವಿರುದ್ಧ 34-30 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು. ಜೆ.ಕೆ.ಅಕಾಡೆಮಿ ಕಾಸರಗೋಡು ತಂಡ ಚಂಡಿವಾಲ ಡೆಲ್ಲಿ ತಂಡದ ವಿರುದ್ಧ 44-22 ಅಂಕಗಳ ಅಂತರದಲ್ಲಿ ಗೆಲುವು ಕಂಡಿತು.ಶುಕ್ರವಾರ ಸಂಜೆ ಕೀಡಾಪಟು ಕೆ.ಎ.ಪ್ರಕಾಶ್ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಪ್ರಮುಖರಾದ ಮಂಜೂರು ತಮ್ಮಣಿ, ಕೆ.ಎಂ.ಲೋಕೇಶ್, ಎಸ್.ಬಿ.ರಮೇಶ್, ಸುರೇಶ್ ಚಕ್ರವರ್ತಿ ಮತ್ತಿತರರು ಕಬಡ್ಡಿ ಅಂಕಣ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಪ್ರೋ ಕಬಡ್ಡಿಯ ಹೆಸರಾಂತ ಆಟಗಾರರು: ರಿಶಾಂತ್ ದೇವಾಡಿಗ, ಸುರೇಶ್ ಹೆಗ್ಗಡೆ, ವಿಶಾಲ್ ಪ್ರಭಾಕರ್ ಮಾನೆ, ಭವನಿ ರಜಪೂತ್, ಹರೀಶ್ ನಾಯಕ್, ನಿತೀಶ್, ವಿನಯ್, ಹರೀಂದರ್, ಕೆ.ಸೆಲ್ವಮಣಿ, ಅಭಿಷೇಕ್, ರಂಜಿತ್‌ನಾಯಕ್, ಸತೀಶ್, ಅಂಕಿತ್‌ಮಾನೆ, ರಾಹುಲ್, ಅಂಕಿತ್ ದುಲ್, ಸಚಿನ್ ವಿಠಲ್, ಆಶು, ವಿಕಾಸ್, ಒಂಕಾರ್ ಪಾಟೀಲ್, ಅಕಾಶ್, ಭವನಿರಾಜ್, ಮೋನು ಅವರುಗಳು ತಮ್ಮ ಆಟದಿಂದ ಕೀಡಾಪ್ರೇಮಿಗಳ ಜನಮನ ಗೆದ್ದರು.